ಬೆಂಗಳೂರು: ಗ್ರಾಹಕರಿಂದ ಹಣ ಪಡೆದು ಫ್ಲ್ಯಾಟ್ ನೀಡದೆ ವಂಚಿಸಿದ ಪ್ರಕರಣದಲ್ಲಿ ಓಝೋನ್ ಅರ್ಬನಾ ಡೆವಲಪರ್ಸ್ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಓಝೋನ್ ಅರ್ಬನಾ ಡೆವಲಪರ್ಸ್, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದೆ. 2015–16ರ ವೇಳೆ ಸಾವಿರಾರು ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿತ್ತು.
2018ರ ಅಂತ್ಯದ ವೇಳೆಗೆ ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಬೇಕಿತ್ತು. ಆದರೆ 2024ರ ವೇಳೆಗೆ ಶೇಕಡ 49ರಷ್ಟು ಫ್ಲ್ಯಾಟ್‌ಗಳು ಮಾತ್ರ ಪೂರ್ಣವಾಗಿದ್ದವು. ಕಂಪನಿಯ ವಿರುದ್ಧ ಗ್ರಾಹಕರು ಹಲವು ದೂರುಗಳನ್ನು ನೀಡಿದ್ದರು. ಆ ದೂರುಗಳ ಆಧಾರದಲ್ಲಿ ಇಸಿಐಆರ್ ದಾಖಲಿಸಿಕೊಂಡಿರುವ ಇ.ಡಿಯು ತನಿಖೆ ಆರಂಭಿಸಿದೆ.
‘ಕಂಪನಿಯ ಬೆಂಗಳೂರು ಕಚೇರಿ, ದೇವನಹಳ್ಳಿಯ ಕಚೇರಿ, ಮುಂಬೈ ಕಚೇರಿ, ಕಂಪನಿಯ ಪ್ರವರ್ತಕರ ಮನೆ ಸೇರಿ ಒಟ್ಟು 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಮಾರಾಟ ಒಪ್ಪಂದ, ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.
‘ಫ್ಲ್ಯಾಟ್ ನಿರ್ಮಾಣದ ಹಣವನ್ನು ಪ್ರವರ್ತಕರು ಅನ್ಯ ಉದ್ದೇಶಕ್ಕೆ, ಇತರೆಡೆ ಹೂಡಿಕೆಗೆ ಬಳಸಿಕೊಂಡಿದ್ದಾರೆ. ಒಂದೇ ಸ್ವತ್ತಿಗೆ ಎರಡು–ಮೂರು ಪ್ರತ್ಯೇಕ ಸಾಲಗಳನ್ನು ಪಡೆದಿರುವುದರ ಸಂಬಂಧ ದಾಖಲೆಗಳು ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.