ADVERTISEMENT

ಪೊಲೀಸ್ ಅಧಿಕಾರಿಗಳ ಅಮಾನತು: ಆದೇಶ ಹಿಂಪಡೆಯಲು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:32 IST
Last Updated 6 ಜೂನ್ 2025, 15:32 IST
ಬಿ.ದಯಾನಂದ 
ಬಿ.ದಯಾನಂದ    

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವಿಗೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ​ ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

‘ತಮ್ಮ ವೈಫಲ್ಯ ಮರೆಮಾಚಲು ಅಧಿಕಾರಿಗಳನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲ’ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ದಯಾನಂದ ಅವರ ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯ ಕೇಳಿ ಬರುತ್ತಿದೆ. ಕಮಿಷನರ್ ಆಗಿದ್ದಾಗ ಅವರ ದಕ್ಷತೆ, ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕರು, ದಯಾನಂದ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡುತ್ತಿದ್ದಾರೆ. ‘I Stand with B Dayanand IPS’ ಎಂಬರ್ಥದ ಪೋಸ್ಟ್​ಗಳು ಹರಿದಾಡುತ್ತಿವೆ.

ADVERTISEMENT

ಬಿಜೆಪಿ ಮುಖಂಡರೂ ಆಗಿರುವ, ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್,  ‘ದಯಾನಂದ ಅವರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಕರಾಳ ಅಧ್ಯಾಯ. ಕಾಲ್ತುಳಿತದಿಂದ ಸಿದ್ದರಾಮಯ್ಯ ಅವರು ಭಯಬೀತರಾಗಿದ್ದಾರೆ.  ಕಾಲ್ತುಳಿತಕ್ಕೆ ಕಾರಣ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ’ ಎಂದು ಆರೋಪಿಸಿದ್ದಾರೆ.

‘ಸತ್ಯ ಹೇಳಿದ್ದಕ್ಕೆ ಬಹುಮಾನ ರೂಪದಲ್ಲಿ ಅಮಾನತು ಮಾಡಿದ್ದಾರೆ. ದಯಾನಂದ​ ಮತ್ತು ಅವರ ತಂಡದವರು ಬೆಂಗಳೂರು ನಗರವನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿದ್ದರು. ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕರಾಗಿರಲಿಲ್ಲ. ಸರ್ಕಾರವು ತನ್ನ ಕೈಗಳ ಮೇಲೆ ರಕ್ತವನ್ನು ಮೆತ್ತಿಕೊಂಡಿದೆ. ಇದೀಗ ಮಿದುಳನ್ನು ಕೂಡ ಸರ್ಕಾರ ಕಳೆದುಕೊಂಡಿದೆ. ಸರ್ಕಾರ ಈಗ ವಿಪತ್ತಿನಲ್ಲಿದೆ’ ಎಂದು ‘ಎಕ್ಸ್’ ಖಾತೆಯಲ್ಲಿ ಕಿಡಿಕಾರಿದ್ಧಾರೆ.

‘ಕಾಲ್ತುಳಿತ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ನ್ಯಾಯಾಂಗ ಹಾಗೂ ಸಿಐಡಿ ತನಿಖೆಗೂ ಆದೇಶಿಸಿದೆ. ಇವೆಲ್ಲದರ ನಡುವೆ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುವ ಪ್ರಯತ್ನ ಮಾಡಿರುವ ರಾಜ್ಯ ಸರ್ಕಾರ ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ನೀಡಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರದ ಈ ಕ್ರಮ ಸರಿಯಲ್ಲ. ಇದು ಬೇಜವಾಬ್ದಾರಿ ಸರ್ಕಾರ’ ಎಂದು ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಆಕ್ರೋಶ ಹೊರ ಹಾಕಿದ್ದಾರೆ. 

‘ಅಧಿಕಾರಿಗಳು ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ. ಇದು ರಾಜಕೀಯ ತೀರ್ಮಾನ. ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ. ಅದಕ್ಕೆ ಪೊಲೀಸ್ ಅಧಿಕಾರಿಗಳು ಯಾಕೆ ಬಲಿ ಆಗಬೇಕು. ದಯಾನಂದ್ ಅವರ ಅಮಾನತು ಆದೇಶ ವಾಪಸ್ ಪಡೆಯಿರಿ’ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.

ಅಧಿಕಾರಿಗಳ ನಿಯೋಜನೆ

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ದಯಾನಂದ ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ತೆರವಾಗಿದ್ದ ಸ್ಥಾನಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರ ಜಾಗಕ್ಕೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರನ್ನು ಪ್ರಭಾರಿಯಾಗಿ ನಿಯೋಜಿಸಿದೆ. ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ ಹುದ್ದೆಯನ್ನು ಸಿಸಿಬಿ ಡಿಸಿಪಿ ಅಕ್ಷಯ್ ಎಂ. ಹಕಾಯ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಕಬ್ಬನ್ ಪಾರ್ಕ್ ಉಪವಿಭಾಗಕ್ಕೆ ಎಸಿಪಿ ರಾಮಚಂದ್ರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಇನ್‌ಸ್ಪೆಕ್ಟರ್‌ ದೇವೆಂದ್ರಪ್ಪ ಅವರನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.