ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಕೈಬಿಟ್ಟು, ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಎಚ್ಚರಿಕೆ ನೀಡಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಜಿ.ಎನ್. ಶ್ರೀಕಂಠಯ್ಯ, ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ, ‘ಈಗ ಬಿಡುಗಡೆಯಾಗಿರುವ ಸಮೀಕ್ಷಾ ವರದಿಯು ಸಮಾಜದ ನಾಗರಿಕರ ವಿಶ್ವಾಸ ಕಳೆದುಕೊಂಡಿದೆ. ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ನಾಗರಿಕರ ಮಾಹಿತಿ ಸಂಗ್ರಹಿಸಿಲ್ಲ. ಸಕಾಲದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಎಚ್. ಕಾಂತರಾಜ ನೇತೃತ್ವದ ಆಯೋಗವು ವಿಫಲವಾಗಿತ್ತು’ ಎಂದು ದೂರಿದರು.
‘2014-15ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 90ರಷ್ಟು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈ ಅಂಶಗಳನ್ನು ಸಮೀಕ್ಷೆ ಒಳಗೊಂಡಿಲ್ಲ’ ಎಂದು ಆರೋಪಿಸಿದರು.
‘10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ಅಪ್ರಸ್ತುತವಾಗುತ್ತವೆ. ನಿಖರತೆ ಕಾಪಾಡಲು ಸಮೀಕ್ಷೆ ವೇಳೆ ಆಧಾರ್ ಲಿಂಕ್ ಮಾಡಿಲ್ಲ. ರಾಜ್ಯದಲ್ಲಿ ಶೇ 15 ರಿಂದ 16ರಷ್ಟು ಇರುವ ಒಕ್ಕಲಿಗ ಜನಸಂಖ್ಯೆಯನ್ನು ಅವೈಜ್ಞಾನಿಕ ಸಮೀಕ್ಷೆಯಿಂದ ಶೇ 10.3ರಷ್ಟು ಎಂದು ನಮೂದಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಹೊಸ ಮೀಸಲಾತಿಯಲ್ಲಿ ಪ್ರವರ್ಗ-1ಎ, ಪ್ರವರ್ಗ-1ಬಿ, ಪ್ರವರ್ಗ-2ಎ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಶೇ 51ರಷ್ಟು ಮೀಸಲಾತಿಯಲ್ಲಿ ಶೇಕಡ 28 ರಷ್ಟನ್ನು ಈ ವರ್ಗಗಳಿಗೆ ನೀಡಲಾಗಿದೆ. 30 ವರ್ಷಗಳಿಂದ ಒಕ್ಕಲಿಗ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿಯನ್ನು ಮಾತ್ರ ನೀಡಲಾಗಿತ್ತು. ಈಗಲೂ ಕೂಡ ಹೊಸ ಮೀಸಲಾತಿಯಲ್ಲಿ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಮೀಸಲಾತಿ ಅಂದರೆ ಶೇ 7ರಷ್ಟು ನೀಡಲಾಗಿದೆ. ಮೀಸಲಾತಿಯನ್ನು ಶೇ 75ಕ್ಕೆ ಹೆಚ್ಚಿಸಿರುವುದರಿಂದ, ಶೇ 16ರಷ್ಟು ಇರುವ ಒಕ್ಕಲಿಗ ಜನಾಂಗಕ್ಕೆ ಶೇಕಡ 12ರಷ್ಟು ಮೀಸಲಾತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.