ADVERTISEMENT

ಅಮೆರಿಕ ಟೆಕಿಗೆ ವಂಚಿಸಿದ ತಂದೆ–ಮಗಳು!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:08 IST
Last Updated 15 ಮಾರ್ಚ್ 2019, 20:08 IST

ಬೆಂಗಳೂರು: ‘ಭಾರತ್ ಮ್ಯಾಟ್ರಿಮೋನಿ’ ವೈವಾಹಿಕ ಜಾಲತಾಣದಲ್ಲಿ ಅಮೆರಿಕದ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರನ್ನು ಪರಿಚಯ ಮಾಡಿಕೊಂಡ ಯುವತಿಯೊಬ್ಬಳು, ತಾನು ಐಎಎಸ್ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಹಂತ ಹಂತವಾಗಿ ₹ 18 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾಳೆ.

ಈ ಸಂಬಂಧ ಎಸ್.ಜ್ಯೋತಿಕೃಷ್ಣನ್ ಎಂಬುವರು ಗುರುವಾರ ಪರಪ್ಪನ ಅಗ್ರಹಾರ ಠಾಣೆಗೆ ದೂರು ಕೊಟ್ಟಿದ್ದಾರೆ. ಜೆ.ಪಿ.ನಗರದ ನಿವಾಸಿಗಳು ಎನ್ನಲಾದ ರಮ್ಯಾ ನಾಯರ್ ಹಾಗೂ ಆಕೆಯ ತಂದೆ ಟಿ.ಕೆ.ಕುಜಿರಾಮ್ ಅಲಿಯಾಸ್ ಸುಂದರ್ ವಿರುದ್ಧ ಪೊಲೀಸರು ವಂಚನೆ (ಐಪಿಸಿ 420), ಅಪರಾಧ ಸಂಚು (120ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘2013ರ ಮಾರ್ಚ್‌ನಲ್ಲಿ ಜಾಲತಾಣದಲ್ಲಿ ರಮ್ಯಾ ನಾಯರ್ ಪರಿಚಯವಾಯಿತು. ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದೆವು. ಕೆಲ ದಿನಗಳ ಬಳಿಕ ಆಕೆಯ ತಂದೆ ಕರೆ ಮಾಡಿ, ‘ನನ್ನ ಮಗಳು ಐಎಎಸ್ ಮಾಡುತ್ತಿದ್ದಾಳೆ. ಎರಡು ವರ್ಷಗಳ ನಂತರ ಮದುವೆ ಮಾಡಿ ಕೊಡುತ್ತೇವೆ. ಐಎಎಸ್‌ ತಯಾರಿಗೆ ಸ್ವಲ್ಪ ಹಣಕಾಸಿನ ಸಮಸ್ಯೆ ಇದೆ’ ಎಂದು ಹೇಳಿದ್ದರು. ಹೀಗಾಗಿ, ಅವರ ಬ್ಯಾಂಕ್ ಖಾತೆಗೆ ₹ 3 ಲಕ್ಷ ಹಾಕಿದ್ದೆ’ ಎಂದು ಜ್ಯೋತಿಕೃಷ್ಣನ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಆ ನಂತರ ಐ–ಫೋನ್, ಐ–ಪ್ಯಾಡ್ ಹಾಗೂ ಇತರೆ ವಸ್ತುಗಳ ಖರೀದಿಗೆಂದು ಮತ್ತೆ ₹ 2 ಲಕ್ಷ ಹಾಕಿದ್ದೆ. 2017ರಲ್ಲಿ ಅನಾರೋಗ್ಯದ ನೆಪ ಹೇಳಿ ತುರ್ತು ಚಿಕಿತ್ಸೆಗೆಂದು ₹ 13 ಲಕ್ಷ ಪಡೆದುಕೊಂಡರು. ಅದೇ ವರ್ಷ ಬೆಂಗಳೂರಿಗೆ ಬಂದ ನಾನು, ಮದುವೆ ಮಾತುಕತೆಗೆಂದು ಅವರ ಮನೆಗೆ ಹೋಗಿದ್ದೆ. ಆಗ ಮುಂದಿನ ವರ್ಷ ಮದುವೆ ಮಾಡುವುದಾಗಿ ಹೇಳಿ ಕಳುಹಿಸಿದ್ದರು. ಹೀಗೆ, ಪ್ರತಿಬಾರಿ ಏನೇನೋ ಕಾರಣ ಹೇಳಿ ದಿನಾಂಕ ಮುಂದೂಡುತ್ತಿದ್ದರಿಂದ ನನಗೆ ಸಂಶಯ ಬಂತು.’

‘ಹೀಗಾಗಿ, ಅಂತಿಮ ಮಾತುಕತೆಗಾಗಿ ಇದೇ ಫೆ.20ರಂದು ಪುನಃ ಭೇಟಿಯಾಗಲು ತೆರಳಿದ್ದೆ. ಆದರೆ, ಅವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಈಗ ಮೊಬೈಲ್‌ಗಳೂ ಸ್ವಿಚ್ಡ್ ಆಫ್ ಆಗಿವೆ. ನನಗೆ ನಂಬಿಸಿ ₹ 18 ಲಕ್ಷ ಸುಲಿಗೆ ಮಾಡಿರುವ ತಂದೆ–ಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.