ADVERTISEMENT

ಅಭಿವೃದ್ಧಿ ಕಾಯ್ದಿರಿಸಿದ ಅನುದಾನದಲ್ಲಿ ಲ್ಯಾಪ್‌ಟಾಪ್‌ ಖರೀದಿ ಅಕ್ರಮವಲ್ಲ: ಮೇಯರ್‌

ಮೇಯರ್‌ ಗೌತಮ್‌ ಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 19:26 IST
Last Updated 8 ಸೆಪ್ಟೆಂಬರ್ 2020, 19:26 IST
ಗೌತಮ್‌ ಕುಮಾರ್‌
ಗೌತಮ್‌ ಕುಮಾರ್‌   

ಬೆಂಗಳೂರು: ‘ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ ಕಾಯ್ದಿರಿಸಿದ ಅನುದಾನವನ್ನು ಲ್ಯಾಪ್‌ಟಾಪ್‌ ಖರೀದಿಗೆ ಬಳಸುವುದು ಕಾನೂನುಬಾಹಿರವಲ್ಲ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಕೈಗೊಂಡ ಈ ನಿರ್ಣಯವನ್ನು ಕೌನ್ಸಿಲ್‌ ಅನುಮೋದಿಸಿದೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಶಾಲಾ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಗತ್ಯವಿದೆ. ಹಾಗಾಗಿಯೇ ಅವುಗಳನ್ನು ಖರೀದಿಸುತ್ತಿದ್ದೇವೆ. ದರ ನಿಗದಿಪಡಿಸುವುದು ಆಯುಕ್ತರ ವಿವೇಚನೆಗೆ ಬಿಟ್ಟಿದ್ದು’ ಎಂದರು.

‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ‘ಆರ್ಥಿಕ ಹೊರೆ ₹22,657 ಕೋಟಿ’ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ವರ್ಷವೂ ಅಕ್ಟೋಬರ್–ನವೆಂಬರ್‌ನಲ್ಲಿ ಹಣದ ಕೊರತೆ ಎದುರಾಗುವುದು ಸಹಜ. ಈ ಬಾರಿ ಕೋವಿಡ್‌ನಿಂದಾಗಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ’ ಎಂದರು.

ADVERTISEMENT

‘ಬಿಬಿಎಂಪಿ ಆಸ್ತಿ ಎಷ್ಟಿದೆ ಎಂಬುದನ್ನುಬಜೆಟ್‌ನಲ್ಲಿ ಉಲ್ಲೇಖಿಸುತ್ತಿಲ್ಲ. ಬಿಬಿಎಂಪಿಯ ಆಸ್ತಿಗಳನ್ನು ಗುರುತಿಸಿ, ಅವುಗಳ ಮೌಲ್ಯ ವಿಶ್ಲೇಷಿಸಿದರೆಪಾಲಿಕೆ ಎಷ್ಟು ಶ್ರೀಮಂತ ಎಂಬುದು ಗೊತ್ತಾಗುತ್ತದೆ’ ಎಂದರು.

‘ಅನುದಾನದ ಲಭ್ಯತೆ ನೋಡಿಕೊಂಡು ಕಾಮಗಾರಿ ಬಿಲ್‌ ಪಾವತಿಸಲು ಆಯುಕ್ತರಿಗೆ ಅಧಿಕಾರ ನೀಡಿದ್ದೇವೆ. ಪೂರ್ಣಗೊಂಡ ಮತ್ತು ಮುಂದುವರಿದ ಕಾಮಗಾರಿಗಳ ಹಾಗೂ ಬ್ಯಾಂಕ್‌ ಖಾತೆಗಳ ಲೆಕ್ಕಪರಿಶೋಧನೆ ಸರಿಯಾಗಿ ಆಗುತ್ತಿಲ್ಲ’ ಎಂದು ಟೀಕಿಸಿದರು.

‘ಒಳ್ಳೆಯ ಸಂಸ್ಕಾರ ಸಿಕ್ಕರೆ ಇರದು ಡ್ರಗ್ಸ್‌ ಹಾವಳಿ’

‘ಯುವಜನರಿಗೆ ಮನೆಯಲ್ಲಿ ಒಳ್ಳೆ ಸಂಸ್ಕಾರ ಸಿಕ್ಕರೆ ಡ್ರಗ್ಸ್‌ ಹಾವಳಿ ಇರುವುದಿಲ್ಲ’ ಎಂದು ಮೇಯರ್‌ ಅಭಿಪ್ರಾಯಪಟ್ಟರು.

‘ಕೆಲವು ಕ್ಷೇತ್ರಗಳಲ್ಲಿ ಡ್ರಗ್ಸ್‌ ಪ್ರಭಾವ ಜಾಸ್ತಿ ಇದೆ. ಈ ಹಾವಳಿ ಎಲ್ಲೆಲ್ಲಿ ಬೇರು ಬಿಟ್ಟಿದೆ ಎಂಬುದು ಸಿಸಿಬಿ ತನಿಖೆಯಿಂದ ಬೆಳಕಿಗೆ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು. ‘ದಕ್ಷಿಣ ಆಫ್ರಿಕಾದಿಂದ ಶೈಕ್ಷಣಿಕ ವಿಸಾ ಪಡೆದು ನಗರಕ್ಕೆ ಬರುವ ಅನೇಕರು ವಿಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ಮರಳುತ್ತಿಲ್ಲ. ನೈಜೀರಿಯಾದಿಂದ ಬಂದವರು ಹೆಚ್ಚಾಗಿ ಇಲ್ಲೇ ಉಳಿಯುತ್ತಾರೆ ಎಂಬ ಮಾಹಿತಿ ಪೊಲೀಸರ ಬಳಿ ಇದೆ. ಅಂತಹವರನ್ನು ಬಂಧಿಸಿ ಅವರ ದೇಶಕ್ಕೆ ವಾಪಾಸ್‌ ಕಳುಹಿಸಬೇಕು. ರಾಷ್ಟ್ರೀಯ ಭದ್ರತೆಗೂ ಇದರಿಂದ ಅನುಕೂಲವಾಗಲಿದೆ’ ಎಂದರು. ‘ಪಾನ್‌ ಅಂಗಡಿಗಳಲ್ಲಿ ಡ್ರಗ್ಸ್‌ ತುಂಬಿಸಿದ ಬೀಡಾ ಮಾರಾಟ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಆರೋಗ್ಯಾಧಿಕಾರಿಗಳಿಗೆ ಸೂಚಿಸುತ್ತೇನೆ. ಒಳ್ಳೆಯ ಸಮಾಜ ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.