ADVERTISEMENT

ಉತ್ತರಹಳ್ಳಿ: ನೀರು ಕಲುಷಿತಗೊಳ್ಳಲು ‘ಸ್ಯಾನಿಟರಿ ಪ್ಯಾಡ್‌’ ಕಾರಣ !

ಉತ್ತರಹಳ್ಳಿ: ಕಲುಷಿತ ನೀರು ಬಳಸಿ ಅಸ್ವಸ್ಥಗೊಂಡಿದ್ದ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 21:15 IST
Last Updated 13 ಸೆಪ್ಟೆಂಬರ್ 2021, 21:15 IST
ಬಾಕ್ಸ್‌ ಜೊತೆಗೆ ಈ ಫೋಟೊ ತೆಗೆದುಕೊಳ್ಳಬೇಕು 
ಬಾಕ್ಸ್‌ ಜೊತೆಗೆ ಈ ಫೋಟೊ ತೆಗೆದುಕೊಳ್ಳಬೇಕು    

ಬೆಂಗಳೂರು: ನಗರದ ಉತ್ತರಹಳ್ಳಿ ವಾರ್ಡ್‌ ಸಂಖ್ಯೆ 184ರ ರಾಮಾಂಜನೇಯ ನಗರ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳಲು ‘ನೈರ್ಮಲ್ಯ ಪ್ಯಾಡ್‌’ (ಸ್ಯಾನಿಟರಿ ಪ್ಯಾಡ್‌) ಕಾರಣ ಎಂಬುದು ಗೊತ್ತಾಗಿದೆ.

ಕೊಳವೆ ಬಾವಿಗಳಿಂದ ಬಂದ ಕಲುಷಿತ ನೀರು ಬಳಸಿದ ಏಳು ಅಪಾರ್ಟ್‌ಮೆಂಟ್ಸ್‌ ಸಮುಚ್ಚಯ ನಿವಾಸಿಗಳು ಆಸ್ಪತ್ರೆ ಸೇರಿದ್ದರು. ತಲೆನೋವು, ವಾಂತಿ–ಭೇದಿಯಿಂದ ನರಳಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.

ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹಾಗೂ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಈ ವಾರ್ಡ್‌ನ ಆನಂದ ವಾಣಿಜ್ಯ ಸಂಕೀರ್ಣದಲ್ಲಿ ಶಾರದಾ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳ ಪಿ.ಜಿ ಇದೆ. ಇಲ್ಲಿನ ಮಹಿಳೆಯರು ಬಳಸಿದ ನ್ಯಾಪ್‌ಕಿನ್‌ಗಳು ಖಾಲಿ ಬಿದ್ದಿದ್ದ ಕೊಳವೆಬಾವಿಯಲ್ಲಿ ತುರುಕಿಸಿ ವಿಲೇ ಮಾಡಿದ್ದರು. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಪರಿಶೀಲನೆಯಿಂದ ಪತ್ತೆಯಾಗಿದೆ.

‘ಒಳಚರಂಡಿ ಕೊಳವೆ ಕಟ್ಟಿಕೊಂಡಿತ್ತು. ಪಿ.ಜಿಯ ನಿವಾಸಿಗಳು ಬೇರೆ ದಾರಿ ಕಾಣದೇ, ಕೆಟ್ಟುಹೋಗಿದ್ದ ಕೊಳವೆಬಾವಿಯೊಳಗೆ ನೈರ್ಮಲ್ಯ ಪ್ಯಾಡ್‌ಗಳನ್ನು ತುರುಕಿದ್ದಾರೆ. ಪ್ಯಾಡ್‌ಗಳಲ್ಲಿನ ರಕ್ತದ ಅಂಶ ಮಳೆ ನೀರಿನೊಂದಿಗೆ ಮಣ್ಣನ್ನು ಸೇರಿದೆ. 100 ಅಡಿಗಳಿಂದ 200 ಅಡಿಯ ಆಳದವರಿಗೂ ಇದು ಪಸರಿಸಿದೆ. ಇದರಿಂದ ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಇನ್ನು 10 ದಿನಗಳ ನಂತರ ಕೊಳವೆ ಬಾವಿಯ ನೀರನ್ನು ಬಳಸಬಹುದು’ ಎಂದು ಅವರು ತಿಳಿಸಿದರು.

ಆನಂದ ವಾಣಿಜ್ಯ ಸಂಕೀರ್ಣದ ಮಾಲೀಕ ಆನಂದ ನಾಯ್ದು, ‘ಶಾರದಾ ನರ್ಸಿಂಗ್ ಕಾಲೇಜಿನವರಿಗೆ ಕಟ್ಟಡವನ್ನು ಬಾಡಿಗೆಗೆ ನೀಡಿದ್ದೇವೆ. ಅವರು ಈ ಬಗ್ಗೆ ಗಮನ ಹರಿಸಬೇಕಾಗಿತ್ತು. ಕಾಲೇಜಿನ ಮುಖ್ಯಸ್ಥರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಾರ್ವಜನಿಕರಿಗೆ ಆಗಿರುವ ತೊಂದರೆಯ ಬಗ್ಗೆ ನಮಗೂ ಬೇಸರವಿದೆ. ಇದು ನಮ್ಮ ಗಮನಕ್ಕೆ ಬಾರದೆ ಆಗಿರುವ ಅಚಾತುರ್ಯ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.