ನೆಲಮಂಗಲ: ‘ಸರ್ಕಾರದ ಮಟ್ಟದಲ್ಲಿ ಶಿಫಾರಸು ಮಾಡಿ ಇಲ್ಲಿನ ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಗೆ ನಿವೇಶನ ಮಂಜೂರು ಮಾಡಿಸುತ್ತೇನೆ ಮತ್ತು ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿಯೂ ಸಹಕಾರ ನೀಡುತ್ತೇನೆ‘ ಎಂದು ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು.
ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ‘ರೊಟ್ಟಿ ಪಂಚಮಿ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘1992ರಲ್ಲಿ ಸ್ಥಾಪನೆಯಾದ ಸಂಘಕ್ಕೆ ನಿವೇಶನ ಮಂಜೂರು ಮಾಡಿಸುವುದು ನನ್ನ ಜವಾಬ್ದಾರಿ‘ ಎಂದರು.
ಬಸವಣ್ಣದೇವರ ಮಠದ ಸಿದ್ದಲಿಂಗ ಶ್ರೀಗಳು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. 'ಮುಂದಿನ ವರ್ಷದ ವೇಳೆ, ವೇದಿಕೆಯು ಸ್ವಂತ ಕಚೇರಿಯನ್ನು ನಿರ್ಮಿಸುವಂತಾಗಲಿ‘ ಎಂದು ಹಾರೈಸಿದರು.
ಸದಸ್ಯರೆಲ್ಲರೂ ಉತ್ತರ ಕರ್ನಾಟಕದ ವಿವಿಧ ವೇಷಭೂಷಣಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಖಡಕ್ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಗೋಧಿ ಹುಗ್ಗಿ, ಪುಂಡಿ, ಕಾಳು ಪಲ್ಯ, ಎಣ್ಣೆಗಾಯಿ, ಶೇಂಗಾ, ಹುಚ್ಚೆಳ್ಳು ಚಟ್ನಿ, ಗಟ್ಟಿ ಮೊಸರು, ಮೆಂತ್ಯಸೊಪ್ಪು ಮಿಶ್ರಿತ ಪಚಡಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಬಿ.ಟಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ.ವಿ.ನೆಗಳೂರ ಸಂಘ ನಡೆದುಬಂದ ಹಾದಿಯನ್ನು ವಿವರಿಸಿದರು. ಪದಾಧಿಕಾರಿಗಳಾದ ಎಂ.ಸಿ.ಪಾಟೀಲ್, ಶರಣಬಸಪ್ಪ ಗೌಡರ್, ಜಯಶ್ರೀ ವಿಜಯ್‌ಕುಮಾರ್, ಪ್ರಲ್ಹಾದ ಕುಲಕರ್ಣಿ, ವೀರಭದ್ರಪ್ಪ ಕರ್ಜಗಿ, ರಾಜಕುಮಾರ್ ಮಾಕಾಪುರ, ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಗೌಡ, ವೈದ್ಯಸಂಘದ ಅಧ್ಯಕ್ಷ ಡಾ.ಎಂ.ಜಯಪ್ರಸಾದ್, ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಮುಖಂಡ ನಾಗರಾಜು, ಸಿ.ಆರ್.ಗೌಡ ಇತರರು ಇದ್ದರು. ಕೂಡಲ ಸಂಗಮ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್.ಬಿರಾದರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.