ADVERTISEMENT

ಹಾಡು–ಕುಣಿತದ ಸಂಭ್ರಮ, ರೊಟ್ಟಿ ಊಟದ ಸವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 19:20 IST
Last Updated 14 ಜೂನ್ 2025, 19:20 IST
ಉತ್ಸವದಲ್ಲಿ ‘ಅಮರ ಮಧುರ ಪ್ರೇಮ’ ನಾಟಕ ಪ್ರದರ್ಶಿಸಲಾಯಿತು
–ಪ್ರಜಾವಾಣಿ ಚಿತ್ರ 
ಉತ್ಸವದಲ್ಲಿ ‘ಅಮರ ಮಧುರ ಪ್ರೇಮ’ ನಾಟಕ ಪ್ರದರ್ಶಿಸಲಾಯಿತು –ಪ್ರಜಾವಾಣಿ ಚಿತ್ರ    

ಬೆಂಗಳೂರು: ಉತ್ತರ ಕರ್ನಾಟಕದ ಹಾಡು, ಕುಣಿತ, ನಾಟಕವನ್ನು ಒಂದೇ ಸೂರಿನಡಿ ಕಣ್ತುಂಬಿಕೊಂಡು ಸಂಭ್ರಮಿಸಿದ ನಗರದ ಜನರು, ಆ ಭಾಗದ ವಿಶೇಷ ರೊಟ್ಟಿ ಊಟವನ್ನು ಸವಿದರು.

ಹೋಟೆಲ್ ನಳಪಾಕ, ವಂದೇ ಕರ್ನಾಟಕ ಹಾಗೂ ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಉತ್ತರೋತ್ತಮ ಉತ್ಸವ’ವು ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಸೊಗಡನ್ನು ಪರಿಚಯಿಸಿತು. 

ಈ ಸಾಂಸ್ಕೃತಿಕ ಉತ್ಸವದಲ್ಲಿ ಐಶ್ವರ್ಯ ದೇಸಾಯಿ ಅವರು ಹಿಂದೂಸ್ಥಾನಿ ಗಾಯನವನ್ನು ಪ್ರಸ್ತುತಪಡಿಸಿದರು. ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಅವರು ನಡೆಸಿಕೊಟ್ಟ ಸಂಗೀತ ವೈವಿಧ್ಯ ಕಾರ್ಯಕ್ರಮವು ನೆರೆದಿದ್ದವರನ್ನು ರಂಜಿಸಿತು. ಗುರುಬಲ ಎಂಟರ್ಟೈನರ್ಸ್ ವತಿಯಿಂದ ‘ಅಮರ ಮಧುರ ಪ್ರೇಮ’ ನಾಟಕವನ್ನು ಪ್ರದರ್ಶಿಸಲಾಯಿತು.

ADVERTISEMENT

ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್‌ ವತಿಯಿಂದ ಪ್ರಸ್ತುತಪಡಿಸಿದ ‘ರಾಶಿಚಕ್ರ’ ಏಕವ್ಯಕ್ತಿ ಹಾಸ್ಯ ರಂಗಪ್ರಯೋಗವು ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಿತು. ಕಲಾವಿದೆ ಸ್ಫೂರ್ತಿ ಜೋಶಿ ಅವರು ಕಥಕ್ ನೃತ್ಯ ಪ್ರಸ್ತುತಪಡಿಸಿದರು.

ಇದೇ ಸಮಾರಂಭದಲ್ಲಿ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರನ್ನು ಗೌರವಿಸಲಾಯಿತು. ರಂಗಭೂಮಿ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

ರಾಜಾಜಿನಗರದ ನಳಪಾಕ ಹೋಟೆಲ್‌ ವತಿಯಿಂದ ಉತ್ತರ ಕರ್ನಾಟಕದ ರೊಟ್ಟಿ ಊಟ ಏರ್ಪಾಡು ಮಾಡಲಾಗಿತ್ತು. ಕಲಾಸಕ್ತರು ಬಿಸಿ ರೊಟ್ಟಿ, ಪಲ್ಯ, ಖಡಕ್ ರೊಟ್ಟಿ, ಚಟ್ನಿಯನ್ನು ಒಳಗೊಂಡ ಊಟವನ್ನು ಸವಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.