ADVERTISEMENT

ಯುವಿಸಿಇ ವಿಭಜನೆಗೆ ತಜ್ಞರ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:22 IST
Last Updated 29 ಜೂನ್ 2019, 19:22 IST
   

ಬೆಂಗಳೂರು: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವೆ ವಿಭಜಿಸಲು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ನಿವೃತ್ತ ಮುಖ್ಯ ಕಾರ್ಯದರ್ಶಿಎಸ್‌.ವಿ.ರಂಗನಾಥ್‌ ನೇತೃತ್ವದ ಸಮಿತಿಯನ್ನು ಉನ್ನತ ಶಿಕ್ಷಣ ಇಲಾಖೆ ರಚಿಸಿತ್ತು. ಸಮಿತಿ ಶುಕ್ರವಾರ ತನ್ನ ವರದಿಯನ್ನು ಇಲಾಖೆಗೆ ಸಲ್ಲಿಸಿದ್ದು, ಎರಡೂ ವಿಶ್ವವಿದ್ಯಾಲಯಗಳಿಗೆ ಯುವಿಸಿಇಯ ವಿಭಾಗಗಳನ್ನು ಹಂಚಿಕೊಡಬೇಕು ಎಂದು ತಿಳಿಸಿದೆ.

ಕೆ.ಆರ್‌. ವೃತ್ತದಲ್ಲಿರುವಯುವಿಸಿಇಯ ವಿಭಾಗಗಳನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಹಾಗೂ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ವಿಭಾಗಗಳನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಂಚಬೇಕು. ಆದರೆ ಮುಂದಿನ 4 ವರ್ಷ ಪರೀಕ್ಷೆ, ಮೌಲ್ಯಮಾಪನ ಹಾಗೂ ಪ್ರಮಾಣಪತ್ರ ಹಂಚಿಕೆಯನ್ನು ಬೆಂಗಳೂರು ವಿಶ್ವವಿದ್ಯಾಲಯವೇ ನಡೆಸಬೇಕು ಎಂದು ಸಮಿತಿ ತಿಳಿಸಿದೆ. ಸದ್ಯ ಕೆ.ಆರ್‌.ವೃತ್ತದಲ್ಲಿ 4 ವಿಭಾಗಗಳು ಹಾಗೂ ಜ್ಞಾನಭಾರತಿಯಲ್ಲಿ 2 ವಿಭಾಗಗಳಿವೆ.

ADVERTISEMENT

ಆದರೆ ಈ ವರ್ಷ ಯಾರು ಪ್ರವೇಶಾತಿ ಮಾಡಬೇಕು ಎಂಬುದರ ಉಲ್ಲೇಖ ಇಲ್ಲ. ಇದಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ವಿಟಿಯು ಅಧೀನಕ್ಕೆ ಒಳಪಡುವ ಕಾಲೇಜುಗಳಲ್ಲಿ ಎಂಜಿನಿಯರಿಂಗ್‌ ಸೀಟು ಭರ್ತಿಗೆ ಪ್ರಕ್ರಿಯೆ ಆರಂಭಿಸಿದೆ.

‘ಯುವಿಸಿಇ ಅನ್ನು ಪುಣೆಯಲ್ಲಿರುವ ಎಂಜಿನಿಯರಿಂಗ್‌ ಕಾಲೇಜ್‌ನಂತೆ ಸ್ವಾಯತ್ತ ಕಾಲೇಜನ್ನಾಗಿ ಘೋಷಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ. ಆದರೆ ಹೀಗೆ ಘೋಷಿಸುವುದು ಯಾವಾಗ ಎಂಬುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ತಿಳಿಸಿದೆ’ ಎಂದು ಮೂಲಗಳು ಹೇಳಿವೆ.

ಯುವಿಸಿಇ ಅನ್ನು ವಿಭಜಿಸುವ ಶಿಫಾರಸಿಗೆ ವಿದ್ಯಾರ್ಥಿಗಳು, ಸಿಬ್ಬಂದಿ ಸಿಡಿಮಿಡಿಗೊಂಡಿದ್ದಾರೆ. ಕಾಲೇಜನ್ನು ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಒಪ್ಪಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.