ADVERTISEMENT

ಗರ್ಭಕಂಠದ ಕ್ಯಾನ್ಸರ್ ತಡೆಗೆ ಲಸಿಕೆ

ರಾಜ್ಯದಲ್ಲಿ 30 ಲಕ್ಷ ಬಾಲಕಿಯರು ಲಸಿಕೆ ಪಡೆಯಲು ಅರ್ಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 21:07 IST
Last Updated 15 ನವೆಂಬರ್ 2021, 21:07 IST
   

ಬೆಂಗಳೂರು: ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಯಲು ರಾಜ್ಯದಲ್ಲಿ 9 ವರ್ಷಗಳಿಂದ 15 ವರ್ಷಗಳ ನಡುವಿನ ಬಾಲಕಿಯರಿಗೆ ಎರಡು ಡೋಸ್ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವರದಿ ಸಿದ್ಧಪಡಿಸುವಂತೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಸೂಚಿಸಿದೆ.

ಕ್ಯಾನ್ಸರ್ ಕೋಶಗಳ ವಿರುದ್ಧ ನಿರೋಧಕ ಶಕ್ತಿ ವೃದ್ಧಿಸುವ‘ಹ್ಯೂಮನ್‌ ಪ್ಯಾಪಿಲೋಮ ವೈರಸ್‌’ (ಎಚ್‌ಪಿವಿ) ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಈಗಾಗಲೇ ಸಿಕ್ಕಿಂ ರಾಜ್ಯದಲ್ಲಿ ವಿತರಿಸಲಾಗಿದೆ. ಇದು ಎರಡು ಡೋಸ್‌ಗಳನ್ನು ಹೊಂದಿದ್ದು, ಮೊದಲ ಹಾಗೂ ಎರಡನೇ ಡೋಸ್ ನಡುವಿನ ಅಂತರ ಆರು ತಿಂಗಳು ಇರಲಿದೆ. ರಾಜ್ಯದಲ್ಲಿ 9ರಿಂದ 15 ವರ್ಷಗಳೊಳಗಿನ 30 ಲಕ್ಷ ಬಾಲಕಿಯರಿದ್ದು, ಇವರಿಗೆ ಲಸಿಕೆ ವಿತರಣೆಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕಾರ್ಯಯೋಜನೆ ರೂಪಿಸಲಿದೆ.

ಈ ಲಸಿಕೆಗೆ ತಗಲುವ ವೆಚ್ಚ, ಫಲಿತಾಂಶ ಹಾಗೂ ವಿತರಣೆಗೆ ಸಂಬಂಧಿಸಿದ ವರದಿಯನ್ನು ಸಂಸ್ಥೆಯು ಸಿದ್ಧಪಡಿಸಲಿದೆ. ಸಂಸ್ಥೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 20 ಸಾವಿರ ಮಂದಿ ಸದ್ಯ ಗರ್ಭಕಂಠದ ಕ್ಯಾನ್ಸರ್ ಎದುರಿಸುತ್ತಿದ್ದಾರೆ. ರಾಜ್ಯದಾದ್ಯಂತ ತಪಾಸಣೆ ನಡೆಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಯಾನ್ಸರ್‌ ಹೊಂದಿರುವವರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಸಂಸ್ಥೆಯ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಂಸ್ಥೆಯ ದಾಖಲೆಗಳ ಪ್ರಕಾರ 2019ರಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾದ 5,791 ಮಹಿಳೆಯರಲ್ಲಿ 1,301 ಮಂದಿ ಗರ್ಭಕಂಠದ ಕ್ಯಾನ್ಸರ್‌ ಹೊಂದಿದ್ದರು. 1,108 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ದೃಢಪಟ್ಟಿತ್ತು.

₹200 ಕೋಟಿ ವೆಚ್ಚ: ‘ಗರ್ಭಕಂಠದ ಕ್ಯಾನ್ಸರ್ ತಡೆಗೆ‘ಗಾರ್ಡಾಸಿಲ್’ ಮತ್ತು ‘ಸರ್ವಾರಿಕ್ಸ್’ ಕಂಪನಿಗಳು ಲಸಿಕೆ ತಯಾರಿಸುತ್ತಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಭೆಯಲ್ಲಿ ಈ ಲಸಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅರ್ಹ ಬಾಲಕಿಯರಿಗೆ ಈ ಲಸಿಕೆ ನೀಡಲು ₹ 200 ಕೋಟಿ ಅನುದಾನ ಅಗತ್ಯ. ಸಿಕ್ಕಿಂನಲ್ಲಿ ಈ ಲಸಿಕೆಯಿಂದ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣಕ್ಕೆ ಬಂದಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಸಿಕೆಯ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.ಕ್ಯಾನ್ಸರ್‌ ತಪಾಸಣೆಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಹೆಚ್ಚಿನ ಚಿಕಿತ್ಸೆ ಇಲ್ಲದೆಯೇ ಕಾಯಿಲೆ ವಾಸಿ ಮಾಡಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.