
ಬೆಂಗಳೂರು: ‘ಸಮಾಜ ಹಾಗೂ ಮನೋ ವಿಜ್ಞಾನದ ರೂಪದಂತಿರುವ ವಚನಗಳಿಗೆ ಪ್ರತಿಯೊಬ್ಬರ ತನು ಮತ್ತು ಮನದ ಅರಿವನ್ನು ವಿಸ್ತರಿಸಿ, ನಮ್ಮ ನಡುವಿನ ಭೇದಗಳನ್ನು ದೂರ ಮಾಡುವ ಶಕ್ತಿಯಿದೆ’ ಎಂದು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
ಬಸವ ಸೇವಾ ಪ್ರತಿಷ್ಠಾನ, ಸುದ್ದಿಮೂಲ ದಿನಪತ್ರಿಕೆ ಬುಧವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತ ಬಸವರಾಜ ಸ್ವಾಮಿ ಅವರು ಸಂಪಾದಿಸಿರುವ ಬಸವಗೀತೆ ಸತ್ಯಸಂವಾದ 9 ಸಂಪುಟಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೊರಲೋಕದಲ್ಲಿ ಜಾತಿ, ಧರ್ಮ, ಲಿಂಗ ಭೇದ, ನಾನಾ ಸಿದ್ಧಾಂತಗಳ ಆಧಾರದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ. ಇವುಗಳನ್ನು ನಿವಾರಿಸಿ ಲೋಕಕ್ಷೇಮ ಸಾಧಿಸಬೇಕಾದರೆ, ಅದಕ್ಕೆ ಅರಿವಿನ ಮೀಮಾಂಸೆ ಅಗತ್ಯ. ಅಂತಹ ಅರಿವಿನ ಸ್ಫೋಟ ತನು, ಮನದ ಮೂಲಕವೇ ಆಗಬೇಕಿದೆ’ ಎಂದು ತಿಳಿಸಿದರು.
ಜನಾರ್ಪಣೆ ಮಾಡಿದ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ‘ಕರ್ನಾಟಕ ಮಾತ್ರವಲ್ಲದೇ ಎಲ್ಲೆಡೆ ಬಸವತತ್ವ ಅನುಯಾಯಿಗಳು ಇದ್ದಾರೆ. ಬಸವ ತತ್ವ ಪ್ರಚಾರವು ಸಮಾಜದಲ್ಲಿ ಬದಲಾವಣೆಗೆ ದಾರಿಯಾಗಿದೆ. ಬಸವರಾಜ ಸ್ವಾಮಿ ಅವರು ಸಾಮಾಜಿಕ ಪರಿವರ್ತನೆಯ ಕೆಲಸ ಮಾಡುತ್ತಲೇ ಬಸವಗೀತೆ ಸತ್ಯ ಸಂವಾದದ ಸಂಪುಟಗಳ ಮೂಲಕ ವಚನಗಳನ್ನು ವ್ಯಾಖ್ಯಾನಿಸಿರುವುದು ಶ್ಲಾಘನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಅಧ್ಯಾತ್ಮ ಎನ್ನುವುದು ನಮ್ಮೊಳಗಿನ ಸಂವಹನದ ಒಂದು ಹಾದಿ. ಲೌಕಿಕವೇ ಅಧ್ಯಾತ್ಮದ ಬಂಡವಾಳವಾಗಿದ್ದರೂ ಅದನ್ನು ಲೌಕಿಕದ ಬಂಡವಾಳಕ್ಕೆ ಅಧ್ಯಾತ್ಮವನ್ನು ಬಳಸಿಕೊಳ್ಳುವ ಪ್ರಯತ್ನಗಳು ಹೆಚ್ಚುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಲೇಖಕ ಬಸವರಾಜ ಸ್ವಾಮಿ, ಪ್ರಕಾಶಕ ವಿಶ್ವನಾಥ ಬಸವರಾಜ ಸ್ವಾಮಿ ಉಪಸ್ಥಿತರಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವಿದ್ವಾನ್ ಎಂ. ಖಾಸೀಮ್ ಮಲ್ಲಿಗೆಮಡುವು, ಕಲಾವಿದ ಮುರಳೀಧರ ರಾಥೋಡ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.