ADVERTISEMENT

ರಕ್ತನಾಳ ಸಮಸ್ಯೆ ಪತ್ತೆಗೆ ಆದ್ಯತೆ: ಡಾ.ಕೆ.ಎಸ್.ರವೀಂದ್ರನಾಥ್‌

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:56 IST
Last Updated 26 ಏಪ್ರಿಲ್ 2025, 15:56 IST
ರಕ್ತನಾಳದ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ವೈದ್ಯರು ಭಾಗವಹಿಸಿದ್ದರು
ರಕ್ತನಾಳದ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ವೈದ್ಯರು ಭಾಗವಹಿಸಿದ್ದರು   

ಬೆಂಗಳೂರು: ‘ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವಾದರೆ ಜೀವಕ್ಕೇ ಅಪಾಯ ಎದುರಾಗಲಿದೆ. ಆದ್ದರಿಂದ ರಕ್ತನಾಳಗಳಲ್ಲಿನ ಅಡಚಣೆ ಪತ್ತೆಗೆ ಆದ್ಯತೆ ನೀಡಬೇಕಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್‌ ಅಭಿಪ್ರಾಯಪಟ್ಟರು.

ವ್ಯಾಸ್ಕುಲರ್ ಸರ್ಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ವ್ಯಾಸ್ಕುಲರ್ ಸೊಸೈಟಿ ಆಫ್ ಇಂಡಿಯಾ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತನಾಳದ ಸಮಸ್ಯೆ ಹಾಗೂ ಚಿಕಿತ್ಸೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಧೂಮಪಾನ, ಮಾದಕ ವಸ್ತುಗಳ ಸೇವನೆ, ಅನುವಂಶೀಯತೆ ಸೇರಿ ವಿವಿಧ ಕಾರಣಗಳಿಂದ ರಕ್ತನಾಳದ ಸಮಸ್ಯೆಗಳು ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಥೆಯ ಶಾಖೆಯಲ್ಲಿ ರಕ್ತನಾಳ ವಿಭಾಗ ಪ್ರಾರಂಭ ಮಾಡಲಾಗುತ್ತಿದೆ’ ಎಂದರು.

ADVERTISEMENT

‘ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ರಕ್ತನಾಳ ವಿಭಾಗ ಕಾರ್ಯಾರಂಭಿಸಿದೆ. ಅತ್ಯಾಧುನಿಕ ಚಿಕಿತ್ಸಾ ಸೌಕರ್ಯಗಳನ್ನು ಬಳಸಲಾಗುತ್ತಿದೆ. ಉತ್ತಮ ಜೀವನಶೈಲಿಯಿಂದ ರಕ್ತನಾಳದ ಸಮಸ್ಯೆ ನಿಯಂತ್ರಿಸಬಹುದು‘ ಎಂದು ಹೇಳಿದರು.

ರಕ್ತನಾಳದ ಶಸ್ತ್ರಚಿಕಿತ್ಸಕ ಡಾ.ಕೆ.ಆರ್.ಸುರೇಶ್‌, ‘ದೇಹ ರಕ್ತನಾಳಗಳಿಂದ ಕೂಡಿದ ಸಂಕೀರ್ಣ ವ್ಯವಸ್ಥೆಯಾಗಿದೆ.  ಶೇ 80ರಷ್ಟು ರಕ್ತನಾಳದ ಸಮಸ್ಯೆಗಳನ್ನು ಔಷಧ, ಜೀವನಶೈಲಿ ಬದಲಾವಣೆಯಂತಹ ಕ್ರಮಗಳಿಂದ ತಪ್ಪಿಸಬಹುದಾಗಿದೆ‘ ಎಂದರು.

ಜಯದೇವ ಹೃದ್ರೋಗ ಸಂಸ್ಥೆಯ ರಕ್ತನಾಳದ ವಿಭಾಗದ ಮುಖ್ಯಸ್ಥ ಡಾ.ಮುರಳಿಕೃಷ್ಣ ನೆಕ್ಕಂಟಿ, ‘ರಕ್ತನಾಳದ ಸಮಸ್ಯೆಯಿಂದ ಗ್ಯಾಂಗ್ರಿನ್‌ ಕೂಡಾ ಕಾಡಬಹುದು. ಈ ರೀತಿ ಸಮಸ್ಯೆಗೆ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ರಕ್ತನಾಳದ ಸಮಸ್ಯೆ ಪತ್ತೆಗೆ ಸಂಬಂಧಿಸಿದಂತೆ ವೈದ್ಯರಿಗೂ ಅಗತ್ಯ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು. 

ವ್ಯಾಸ್ಕುಲರ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ವೆಂಕಟೇಶ್‌ ರೆಡ್ಡಿ, ಕಾರ್ಯದರ್ಶಿ ಡಾ.ವಿಷ್ಣು ಎಂ., ಶಸ್ತ್ರಚಿಕಿತ್ಸಕ ಡಾ.ಆಂಜಿನಪ್ಪ, ರಕ್ತನಾಳೀಯ ಶಸ್ತ್ರಚಿಕಿತ್ಸಕರಾದ ಡಾ.ಚಂದ್ರಶೇಖರ್‌, ಡಾ.ವಿನಯ್‌ ಕೆ.ಎಸ್.‌, ಡಾ.ಶ್ರವಣ್‌, ಡಾ.ಪೂರ್ಣಿಮಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.