ADVERTISEMENT

ಮೈಸೂರು ರಾಜ್ಯ ಕರ್ನಾಟಕ ಆಗಿದ್ದು ಮರೆತ ಸರ್ಕಾರ: ವಾಟಾಳ್‌ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 21:48 IST
Last Updated 26 ಜುಲೈ 2022, 21:48 IST
ವಾಟಾಳ್‌ ನಾಗರಾಜ್‌
ವಾಟಾಳ್‌ ನಾಗರಾಜ್‌   

ಬೆಂಗಳೂರು: ‘ಮೈಸೂರು’ ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಲು ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಜುಲೈ 26ಕ್ಕೆ 50 ವರ್ಷ ತುಂಬಿದ್ದು, ಈ ಐತಿಹಾಸಿಕ ದಿನವನ್ನು ರಾಜ್ಯ ಸರ್ಕಾರ ಮರೆತಿರುವುದು ಅಕ್ಷಮ್ಯ ಎಂದು ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘1972ರಲ್ಲಿ ಈ ಘಟನೆ ನಡೆದದ್ದು. ಆಗ ಮೈಸೂರನ್ನು ಕರ್ನಾಟಕ ರಾಜ್ಯ ಎಂದು ಬದಲಿಸಲು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನಸ್ಸು ಇರಲಿಲ್ಲ. ಅಂದಿನ ವಿವಿಧ ಪಕ್ಷಗಳ ಮುಖಂಡರ ಒತ್ತಾಯಕ್ಕೆ ಅವರು ಮಣಿಯಲೇ ಬೇಕಾಯಿತು ಮತ್ತು ವಿಧಾನಸಭೆಯಲ್ಲಿ ಕರ್ನಾಟಕ ಎಂದು ಹೆಸರು ಬದಲಿಸುವ ನಿರ್ಣಯ ಮಂಡಿಸಿದರು’
ಎಂದರು.

ಈ ನಿರ್ಣಯ ತೆಗೆದುಕೊಂಡಿದ್ದಕ್ಕೆ ಅರಸು ಅವರ ಮೇಲೆ ನಾವು ಹಲವು ಶಾಸಕರು ಸೇರಿ ಮಲ್ಲಿಗೆ ಹೂವಿನ ವೃಷ್ಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆ ವಿಸ್ತೃತವಾದ ವಿಶ್ಲೇಷಣೆಯನ್ನು ಬರೆದಿತ್ತು. ಆದರೆ ಇಂದಿನ ಬೊಮ್ಮಾಯಿ ಸರ್ಕಾರಕ್ಕೆ ಅದರ ನೆನಪೇ ಇಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿಷಯಗಳನ್ನು ಬಿಟ್ಟರೆ ನಾಡು– ನುಡಿಯ ವಿಚಾರಗಳ ಬಗ್ಗೆ ಏನೂ ಮಾಡುತ್ತಿಲ್ಲ. 50 ವರ್ಷಗಳ ನೆನಪಿನಲ್ಲಿ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕಿತ್ತು ಎಂದು ಅವರು
ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.