ADVERTISEMENT

ಕುಲಸಚಿವರ ಆದೇಶ ರದ್ದುಪಡಿಸಿದ ಕುಲಪತಿ

ಬೆಂಗಳೂರು ವಿ.ವಿ ಹೊರಗುತ್ತಿಗೆ ನೌಕರರ ಕರ್ತವ್ಯ ಬಿಡುಗಡೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 20:22 IST
Last Updated 10 ಅಕ್ಟೋಬರ್ 2021, 20:22 IST
ವೇಣುಗೋಪಾಲ್‌
ವೇಣುಗೋಪಾಲ್‌   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ ಅವರು ಹೊರಡಿಸಿದ್ದ ಆದೇಶವನ್ನು ಕುಲಪತಿ ಕೆ.ಆರ್‌. ವೇಣುಗೋಪಾಲ್‌ ಅವರು ರದ್ದುಪಡಿಸಿದ್ದಾರೆ.

ತಮ್ಮ ಅನುಮೋದನೆ ಇಲ್ಲದೆಯೇ ಕುಲಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಲಪತಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವರು ಮತ್ತು ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಗಿದೆ. ಸಿಂಡಿಕೇಟ್‌ ನಿರ್ಣಯ ಕೈಗೊಳ್ಳುವವರೆಗೆ ಕುಲಸಚಿವರು ಹೊರಡಿಸಿರುವ ಆದೇಶವನ್ನು ತಕ್ಷಣದಿಂದಲೇ ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

2008ರಿಂದ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕಾಲಕಾಲಕ್ಕೆ ಮುಂದುವರಿಸುತ್ತಾ ಬರಲಾಗಿದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ 1,383 ಮಂಜೂರಾದ ಶಿಕ್ಷಕೇತರ ಹುದ್ದೆಗಳಿದ್ದು, 532 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 851 ಹುದ್ದೆಗಳು ವಿವಿಧ ವೃಂದಗಳಲ್ಲಿ ಖಾಲಿ ಉಳಿದಿದ್ದು, ಇದರಲ್ಲಿ 494 ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ಗುತ್ತಿಗೆ ನೌಕರರನ್ನು ನೇಮಕ ಮಾಡಿದ್ದರೆ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಿಗೂ ಆದೇಶಿಸಿತ್ತು. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 851 ಹುದ್ದೆಗಳಿಗೆ 494 ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು, ಇನ್ನೂ 357 ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿ ನೌಕರರು ಇರುವುದಿಲ್ಲ ಎಂದು ವಿವರಿಸಿದ್ದಾರೆ.

ವಿವಿಧ ವಿಭಾಗಗಳಲ್ಲಿ ಹಾಗೂ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಕಚೇರಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

2021–2022ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿರುವುದರಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ. ಈ ಕಾರಣಗಳಿಂದ ಪರ್ಯಾಯ ವ್ಯವಸ್ಥೆಯಾಗುವವರೆಗೂ ಹೊರಗುತ್ತಿಗೆ ನೌಕರರ ಕರ್ತವ್ಯ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.