ADVERTISEMENT

ಸಾವಿಗೆ ಕಾದವರೂ, ಸಾವಿನಿಂದ ಪಾರಾದವರೂ ಮುಖಾಮುಖಿ

ವೀರಪ್ಪನ್ ಸಂಗಡಿಗನಾಗಿ ದಾಳಿ ಮಾಡಿದ್ದ ಅನ್ಬುರಾಜ್‌, ಗುಂಡು ತಾಗಿಯೂ ಬದುಕಿದ್ದ ಗೋಪಾಲ್ ಹೊಸೂರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 0:20 IST
Last Updated 13 ಜನವರಿ 2025, 0:20 IST
ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ‌್ ಹೊಸೂರು ಮತ್ತು ರಂಗನಿರ್ದೇಶಕ ಹುಗಪ್ಪ ಕಟ್ಟಿಮನಿ ಮಧ್ಯೆ ನಿಂತು ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಅನ್ಬುಕುಮಾರ್ ಮಾತನಾಡಿದರು
ಪ್ರಜಾವಾಣಿ ಚಿತ್ರ
ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ‌್ ಹೊಸೂರು ಮತ್ತು ರಂಗನಿರ್ದೇಶಕ ಹುಗಪ್ಪ ಕಟ್ಟಿಮನಿ ಮಧ್ಯೆ ನಿಂತು ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಅನ್ಬುಕುಮಾರ್ ಮಾತನಾಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ ತಂಡವನ್ನು ಹೆಡೆಮುರಿ ಕಟ್ಟಲು ಮಲೆಮಹದೇಶ್ವರ ಬೆಟ್ಟದಲ್ಲಿ ಕೂಂಬಿಂಗ್‌ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿ ಮೇಲೆ ದಾಳಿ ಮಾಡಿದ್ದವರೂ, ಗುಂಡು ತಾಗಿ ಸ್ವಲ್ಪದರಲ್ಲೇ ಪಾರಾದವರೂ ಒಟ್ಟಿಗೆ ನಿಂತು ಅನುಭವ ಹಂಚಿಕೊಳ್ಳುವ ಸಂದರ್ಭಕ್ಕೆ ಈ ಭಾನುವಾರ ಸಾಕ್ಷಿಯಾಯಿತು.

ವೀರಪ್ಪನ್‌ ಸಂಗಾತಿ ಅನ್ಬುರಾಜ್‌ ಮತ್ತು ಆಗ ವಿಶೇಷ ಕಾರ್ಯಪಡೆಯ ಎಸ್‌ಪಿ ಆಗಿದ್ದ ಗೋಪಾಲ್‌ ಹೊಸೂರು ‘ಸಂಕಲ್ಪ ಮೈಸೂರು’ ಹಮ್ಮಿಕೊಂಡಿದ್ದ ‘ಜೈಲಿನಿಂದ ಬಯಲಿಗೆ.. ಬದಲಾದ ಬದುಕು’ ಒಂದು ಮೆಲುಕು ಕಾರ್ಯಕ್ರಮದಲ್ಲಿ ಒಟ್ಟಿಗೆ ನಿಂತು ಮಾತನಾಡಿ ಅಚ್ಚರಿ ಮೂಡಿಸಿದರು.

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಗೋಪಾಲ್ ಹೊಸೂರು ಮತ್ತು ತಂಡ ತೊಡಗಿಸಿಕೊಂಡಿತ್ತು. ಆಗ ವೀರಪ್ಪನ್‌ ತಂಡವು ಗುಂಡಿನ ದಾಳಿ ನಡೆಸಿತ್ತು. ಒಂದು ಗುಂಡು ಹೊಸೂರು ಅವರ ಕುತ್ತಿಗೆಯ ಪಕ್ಕಕ್ಕೆ ತಗುಲಿತ್ತು. ದಾಳಿ ಮಾಡಿದ್ದ ತಂಡದಲ್ಲಿ ಅನ್ಬುರಾಜ್‌ ಕೂಡ ಇದ್ದರು. ಈ ತಂಡವು ಗೋಪಾಲ್ ಹೊಸೂರು ಅವರ ಸಾವು ಬಯಸಿತ್ತು. ಆದರೆ, ಹೊಸೂರು ಅವರು ಸಾವಿನ ದವಡೆಯಿಂದ ಪಾರಾಗಿ ಮರುಹುಟ್ಟು ಪಡೆದಿದ್ದರು.

ADVERTISEMENT

1997ರಲ್ಲಿ ಸೆರೆ ಸಿಕ್ಕಿದ್ದ ಅನ್ಬುರಾಜ್‌ ಆನಂತರ ಜೈಲು ಪಾಲಾಗಿದ್ದರು. 20 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದಾರೆ. ಅನ್ಬುರಾಜ್‌ ಮಾತನಾಡುವಂತೆ ಗೋಪಾಲ‌್ ಹೊಸೂರು ಸೂಚನೆ ನೀಡಿದರು. ಹೊಸೂರು ಮತ್ತು ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಮಧ್ಯೆ ನಿಂತು ಅನ್ಬುರಾಜ್‌ ಅನುಭವ ಹಂಚಿಕೊಂಡರು.

ಪರಾರಿಗಾಗಿ ನಾಟಕ: ‘ನಾನು ಜೈಲ್ಲಲ್ಲಿ ಇರುವಾಗ ಪಾಪಿಲಾನ್‌ ಪುಸ್ತಕ ಓದುತ್ತಿದ್ದೆ. ಅದರಿಂದ ಪ್ರೇರಣೆ ಪಡೆದು ಪರಾರಿಯಾಗಲು ಯೋಚನೆ ಮಾಡಿದ್ದೆ. ಮೂರು ಗೋಡೆಗಳು ಇದ್ದ ಮೈಸೂರು ಜೈಲಿನಲ್ಲಿ ಎರಡು ಗೋಡೆಗಳನ್ನು ಆಗಾಗ ದಾಟಬಹುದಿತ್ತು. ಆದರೆ, ಮೂರನೇ ಗೋಡೆ ದಾಟಲು ಸೆಂಟ್ರಿಗಳು ಬಿಡುತ್ತಿರಲಿಲ್ಲ. ಅತ್ತ ಹೋದರೆ ಹೊಡೆಯುತ್ತಿದ್ದರು. ಗೋಡೆಯೂ ಎತ್ತರವಾಗಿತ್ತು’ ಎಂದು ಅನ್ಬುರಾಜ್‌ ತಿಳಿಸಿದರು.

‘ಒಂದು ದಿನ ಮೂರನೇ ಗೋಡೆಯ ಪಕ್ಕದ ಅರಳಿಕಟ್ಟೆಯಲ್ಲಿ ಹುಲುಗಪ್ಪ ಕಟ್ಟಿಮನಿ ಕುಳಿತಿದ್ದರು. ಅವರು ನಾಟಕ ನಿರ್ದೇಶಕರು ಎಂಬುದು ಗೊತ್ತಿತ್ತು. ನಾಟಕ, ಅಭಿನಯಗಳ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಆದರೆ, ಗೋಡೆ ಹಾರಿ ಪರಾರಿಯಾಗಲು ಅವಕಾಶ ಸಿಗಬಹುದು ಎಂಬ ದೂರಾಲೋಚನೆ ಇಟ್ಟುಕೊಂಡು ನಾಟಕಕ್ಕೆ ಸೇರಿದೆ’ ಎಂದು ವಿವರಿಸಿದರು.

‘ಹಿಂಸೆ, ಹೊಡೆತಗಳಿಂದ ಕೈದಿಯನ್ನು ಪರಿವರ್ತಿಸಲು ಸಾಧ್ಯವಿಲ್ಲ. ಆದರೆ, ಸಂಗೀತ, ಕಲೆ, ನಾಟಕಗಳಿಂದ ಪರಿವರ್ತನೆ ಸಾಧ್ಯ ಎಂಬುದಕ್ಕೆ ನಾನು ಸಾಕ್ಷಿ. ಪರಾರಿಯಾಗಲು ನಾಟಕಕ್ಕೆ ಸೇರಿ ಪರಾರಿಯಾಗುವ ವಿಚಾರವನ್ನೇ ಬಿಟ್ಟು ಪರಿವರ್ತನೆಗೊಂಡೆ. ನಾಟಕದ ಸಂದರ್ಭದಲ್ಲಿ ಭೇಟಿಯಾದ ಕೈದಿ ರೇವತಿಯವರನ್ನೇ ಪ್ರೀತಿಸಿದೆ. ನಮ್ಮಿಬ್ಬರ ನಡತೆ ನೋಡಿ ಮದುವೆಗಾಗಿ 10 ದಿನ ರಜೆ ನೀಡಿ ಪೆರೋಲ್‌ನಲ್ಲಿ ಕಳುಹಿಸಿದ್ದರು. ಮದುವೆಯಾದ ಮರುದಿನ ನಾನು ಮೈಸೂರು ಜೈಲಿಗೆ, ರೇವತಿ ಬೆಂಗಳೂರು ಜೈಲಿಗೆ ಬಂದೆವು. ಕನ್ನಡ ಕಲಿತು, ಕನ್ನಡದಲ್ಲಿಯೇ ಓದಿ ಡಿಗ್ರಿ ಮುಗಿಸಿದೆ. ನಮಗೆ ಬದುಕಿನ ಭರವಸೆ, ನಂಬಿಕೆ ಮೂಡಿಸಿದ್ದು ನಾಟಕ’ ಎಂದು ನೆನಪು ಮಾಡಿಕೊಂಡರು.

ಜೈಲಿನಲ್ಲಿ ಬದಲಾವಣೆಗಾಗಿ, ಕೈದಿಗಳ ಪರಿವರ್ತನೆಗಾಗಿ ಕೈಗೊಂಡ ಪ್ರಮೇಯಗಳನ್ನು ಗೋಪಾಲ‌್ ಹೊಸೂರು ನೆನಪು ಮಾಡಿಕೊಂಡರು. ಹಿಂದಿನ ಯಾವುದೇ ಕಹಿ ಘಟನೆಗಳನ್ನು ಮನಸ್ಸಲ್ಲಿ ಇಟ್ಟುಕೊಳ್ಳದೇ ಕಾರ್ಯನಿರ್ವಹಿಸಿದ್ದರಿಂದ ಇದು ಸಾಧ್ಯವಾಯಿತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.