ADVERTISEMENT

ವಾಹನ ಜಪ್ತಿಯಾದರೆ, ಸಂಚಾರ ನಿಯಮ ತರಬೇತಿ

* ಪೊಲೀಸರ ಹೊಸ ಪ್ರಯೋಗ * 100ಕ್ಕೆ 60 ಅಂಕ ಪಡೆದರಷ್ಟೇ ವಾಹನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:14 IST
Last Updated 3 ನವೆಂಬರ್ 2020, 19:14 IST
ತರಬೇತಿ ಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದ ಸವಾರರ ಜೊತೆ ಸಂಚಾರ ಪೊಲೀಸರು
ತರಬೇತಿ ಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದ ಸವಾರರ ಜೊತೆ ಸಂಚಾರ ಪೊಲೀಸರು   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಂಭೀರ
ವಾಗಿ ಪರಿಗಣಿಸಿರುವ ಪೊಲೀಸರು, ನಿಯಮ ಉಲ್ಲಂಘನೆ ಮಾಡುವವರ ವಾಹನ ಜಪ್ತಿ ಮಾಡಿ ನಿಯಮಗಳ ಬಗ್ಗೆ ತರಬೇತಿ ಕೊಡಿಸಲು ಮುಂದಾಗಿದ್ದಾರೆ.

10ಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿದವರನ್ನು ಪತ್ತೆ ಮಾಡಿ, ಅವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಅದೇ ಸವಾರ ಹಾಗೂ ಚಾಲಕರಿಗೆ, ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತಾ ಸಂಸ್ಥೆಯಲ್ಲಿ
ತರಬೇತಿ ಕೊಡಿಸುತ್ತಿದ್ದಾರೆ. 100ಕ್ಕೆ 60ಅಂಕ ಪಡೆದವರನ್ನು ಮಾತ್ರ ಉತ್ತೀರ್ಣಗೊಳಿಸಿ, ವಾಹನ ಬಿಡುಗಡೆ ಮಾಡುತ್ತಿದ್ದಾರೆ. ತರಬೇತಿ ಖಚಿತಪಡಿಸುವ ಪ್ರಮಾಣ ಪತ್ರಗಳನ್ನೂ ನೀಡುತ್ತಿದ್ದಾರೆ.

ADVERTISEMENT

ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಅವರ ನಿರ್ದೇಶನದಂತೆ ಈ ಹೊಸ ಪ್ರಯೋಗವನ್ನು ಜಾರಿಗೆ ತರಲಾಗಿದೆ.

‘ಬಹುತೇಕರು ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ಪತ್ರ ಪಡೆದಿರುತ್ತಾರೆ. ಆ ಪೈಕಿ ಹಲವರು, ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸಿ, ಅಮಾಯಕರ ಪ್ರಾಣಗಳು ಹೋಗುತ್ತಿವೆ’ ಎಂದು ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ತಿಳಿಸಿದರು.

‘ಒಂದು ವಾರದಲ್ಲಿ 180 ಜನರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ಪತ್ತೆ ಮಾಡಿ ತರಬೇತಿ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.