ADVERTISEMENT

ಕಳ್ಳರ ಸುಳಿವು ಕೊಟ್ಟ ‘ಸಿಗ್ನಲ್’ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 14:33 IST
Last Updated 17 ಏಪ್ರಿಲ್ 2021, 14:33 IST
ಆರೋಪಿಗಳಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು   

ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದಾಸರಹಳ್ಳಿ ಚೊಕ್ಕಸಂದ್ರದ ಗೌಸ್ ಮುದ್ದೀನ್ (24) ಹಾಗೂ ಜಾಲಹಳ್ಳಿ ವೃತ್ತದ ರೋಷನ್ ಪಾಷಾ (23) ಬಂಧಿತರು. ಅವರಿಂದ ₹ 1.50 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಂಧ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಹತ್ತಿರ ಫೆ. 1ರಂದು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಆರೋಪಿಗಳು ಕಳವು ಮಾಡಿದ್ದರು. ಈ ಬಗ್ಗೆ ವಾಹನ ಮಾಲೀಕ ದೂರು ನೀಡಿದ್ದರು. ತಿಂಗಳಾದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ’ ಎಂದರು.

ADVERTISEMENT

ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರು; ‘ಕದ್ದ ವಾಹನದಲ್ಲೇ ಆರೋಪಿಗಳು ನಗರದಲ್ಲಿ ಸುತ್ತಾಡಿದ್ದರು. ಪೀಣ್ಯ ಸಮೀಪದಲ್ಲಿ ಸಂಚಾರ ಸಿಗ್ನಲ್ ಜಂಪ್ ಮಾಡಿದ್ದರು. ಜೊತೆಗೆ, ವಾಹನದಲ್ಲಿ ಮೂವರು ಹೊರಟಿದ್ದರು. ನಿಯಮ ಉಲ್ಲಂಘಿಸಿದ್ದ ವಾಹನದ ಸಮೇತ ಆರೋಪಿಗಳ ಫೋಟೊ, ಸಿಗ್ನಲ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಪೊಲೀಸರು ಹೇಳಿದರು.

‘ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಾಲೀಕರಿಗೆ ಚಲನ್ ಸಮೇತ ನೋಟಿಸ್‌ ಬಂದಿತ್ತು. ತಮ್ಮ ವಾಹನ ಕಳುವಾಗಿರುವುದಾಗಿ ಸ್ಪಷ್ಟನೆ ನೀಡಿದ್ದ ಮಾಲೀಕ, ಠಾಣೆಗೆ ಮಾಹಿತಿ ನೀಡಿದ್ದರು.’

‘ನೋಟಿಸ್‌ ಸಮೇತ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗಿ ಆರೋಪಿಗಳು ಹಾಗೂ ವಾಹನದ ಫೋಟೊ ಪಡೆಯಲಾಯಿತು. ಸಿಗ್ನಲ್‌ ಬಳಿಯ ಇತರೆ ಕ್ಯಾಮೆರಾವನ್ನೂ ಪರಿಶೀಲಿಸಿ ಮಾಹಿತಿ ಕಲೆಹಾಕಲಾಯಿತು. ಅದೇ ಸುಳಿವು ಆಧರಿಸಿ ಆರೋಪಿಗಳನ್ನೂ ಬಂಧಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.