ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನ
ಪೀಣ್ಯ ದಾಸರಹಳ್ಳಿ: ಸಿಡೇದಹಳ್ಳಿ ಸೌಂದರ್ಯ ಬಡಾವಣೆಯ ಸೌಂದರ್ಯ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವರ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ ಹಾಗೂ ಬಹ್ಮಕಲಶೋತ್ಸವ ಸಮಾರಂಭ ಶನಿವಾರದಿಂದ ಆರಂಭವಾಗಿದ್ದು, 23ರವರೆಗೆ ಮುಂದುವರಿಯಲಿದೆ.
ಆರು ದಿನಗಳು ನಿತ್ಯ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬೆಳ್ತಂಗಡಿಯ ವಿದ್ವಾನ್ ಕೆ.ಆರ್. ಶಶಾಂಕ ಇನ್ನಂಜೆತ್ತಾಯ ನೇತೃತ್ವದ ವೈದಿಕರು ಸೌಂದರ್ಯ ವೆಂಕಟರಮಣ ಸ್ವಾಮಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಿದ್ದಾರೆ.
ಮೇ 17ರ ಬೆಳಗ್ಗೆ 8 ಗಂಟೆಗೆ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಲಿವೆ. ನಿತ್ಯ ಸಂಜೆ ಹರಿಕಥೆ, ಭರತನಾಟ್ಯ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
18ರಂದು ಭಾನುವಾರ ಸಂಜೆ ಏಕದಂತ ಭಜನಾ ಮಂಡಳಿ ಭಜನೆ, 19ರಂದು ಸಂಜೆ ಕೊಳಲುವಾದನ, ಭರತನಾಟ್ಯ, ಧಾರ್ಮಿಕ ಉಪನ್ಯಾಸ ಜರುಗಲಿದೆ. 20ರಂದು ಭಜನಾ ಮಂಡಳಿ ಹಾವನೂರು ತಂಡದಿಂದ ಹರಿಕಥೆ, ಸಂಗೀತ, ಭರತ ನಾಟ್ಯ, ಭಜನೆ ಮಹಿಳಾ ಮಂಡಳಿ ಅವರಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಲಾಗಿದೆ.
ಮೇ 21ರಂದು ಬೆಳಿಗ್ಗೆ ಬ್ರಹ್ಮಕಲಶ ಸ್ಥಾಪನೆ, ದೇವರ ಪ್ರತಿಷ್ಠಾಪನೆ, ಸಂಜೆ 4 ಗಂಟೆಗೆ ವಿಶ್ವಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಮಾಜಿ ಸಂಸದ ಡಿ.ಕೆ ಸುರೇಶ್, ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಆರ್.ಮಂಜುನಾಥ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.