ADVERTISEMENT

5 ವರ್ಷ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ: ಎಸ್‌ಸಿ ಶೇ 2.8, ಎಸ್‌ಟಿ ಶೇ 1.3

5 ವರ್ಷಗಳಲ್ಲಿ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ

ಪಿಟಿಐ
Published 1 ಜನವರಿ 2023, 20:36 IST
Last Updated 1 ಜನವರಿ 2023, 20:36 IST
   

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ನಡೆದ ನೇಮಕಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ), ಅಲ್ಪಸಂಖ್ಯಾತರ ಪ್ರಮಾಣವು ಬಹಳ ಕಡಿಮೆ ಇದೆ ಎಂದು ನ್ಯಾಯಾಂಗ ಇಲಾಖೆಯು ಸಂಸದೀಯ ಸಮಿತಿಯೊಂದಕ್ಕೆ ಮಾಹಿತಿ ನೀಡಿದೆ.

2018ರಿಂದ 2022ರ ಡಿಸೆಂಬರ್‌ 19ರವರೆಗೆ 537 ನ್ಯಾಯಮೂರ್ತಿಗಳನ್ನು ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗಿದೆ. ಅವರ ‍ಪೈಕಿ ಶೇ 2.8ರಷ್ಟು ಎಸ್‌ಸಿ, ಶೇ 1.3ರಷ್ಟು ಎಸ್‌ಟಿ, ಶೇ 11ರಷ್ಟು ಒಬಿಸಿ ಮತ್ತು ಶೇ 2.6ರಷ್ಟು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ನ್ಯಾಯಾಂಗ ಇಲಾಖೆಯು ಹೇಳಿದೆ. ಈ ಅವಧಿಯಲ್ಲಿ ನೇಮಕವಾದ 20 ನ್ಯಾಯಮೂರ್ತಿಗಳ ಹಿನ್ನೆಲೆಯ ಬಗೆಗಿನ ಮಾಹಿತಿ ಲಭ್ಯವಿಲ್ಲ ಎಂದೂ ಇಲಾಖೆಯು ತಿಳಿಸಿದೆ.

ನ್ಯಾಯಮೂರ್ತಿಗಳ ನೇಮಕದ ಹೊಣೆಯನ್ನು ನ್ಯಾಯಾಂಗವೇ ವಹಿಸಿಕೊಂಡು ಮೂರು ದಶಕಗಳಾಗಿವೆ. ಹಾಗಿದ್ದರೂ ಎಲ್ಲರನ್ನೂ ಒಳಗೊಳ್ಳುವಂತೆ ಹಾಗೂ ಸಾಮಾಜಿಕ ವೈವಿಧ್ಯವು ಪ್ರತಿಬಿಂಬಿಸುವಂತೆ ನೇಮಕಾತಿ ನಡೆಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಂಗ ಇಲಾಖೆಯು ಹೇಳಿದೆ.

ADVERTISEMENT

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಾತಿ ಪ್ರಸ್ತಾವಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯು ಕೊಲಿಜಿಯಂನದ್ದಾಗಿದೆ. ಹಾಗಾಗಿ, ಶಿಫಾರಸಿನಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಹೆಸರುಗಳು ಇರುವಂತೆ ನೋಡಿಕೊಳ್ಳುವುದು ಕೊಲಿಜಿಯಂನ ಜವಾಬ್ದಾರಿ
ಯಾಗಿದೆ ಎಂದು ನ್ಯಾಯಾಂಗ ಇಲಾಖೆಯು ಹೇಳಿದೆ.

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದವರನ್ನು ಮಾತ್ರ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ಸರ್ಕಾರ ನೇಮಿಸಬಹುದಾಗಿದೆ ಎಂದು ಇಲಾಖೆಯು ವಿವರಿಸಿದೆ. ಬಿಜೆಪಿಯ ಸಂಸದ ಸುಶೀಲ್‌ ಮೋದಿ ಅವರ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿಯ ಮುಂದೆ ನ್ಯಾಯಾಂಗ ಇಲಾಖೆಯು ವಿವರವಾದ ವರದಿಯನ್ನು ಮಂಡಿಸಿದೆ.

ಸರ್ಕಾರ–ಕೋರ್ಟ್‌ ಜಟಾಪಟಿ

ನ್ಯಾಯಮೂರ್ತಿ ನೇಮಕಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ನಡುವೆ ಜಟಾಪ‍ಟಿ ನಡೆಯುತ್ತಿದೆ.

ನ್ಯಾಯಮೂರ್ತಿಗಳ ನೇಮಕಕ್ಕಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ರಚಿಸಲು ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಕಾನೂನು ರೂಪಿಸಿತ್ತು. ಆದರೆ, ಎನ್‌ಜೆಎಸಿ ಸಂವಿಧಾನಬಾಹಿರ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಅದನ್ನು ರದ್ದುಪಡಿಸಿತ್ತು. ನ್ಯಾಯಾಂಗವೇ ನ್ಯಾಯಮೂರ್ತಿಗಳನ್ನು ನೇಮಿಸುವ ಪದ್ಧತಿಯು ಸರಿಯಲ್ಲ ಎಂದು ಕೇಂದ್ರದ ಕಾನೂನು ಸಚಿವ ಕಿರಣ್‌ ರಿಜಿಜು ಹಲವು ಬಾರಿ ಹೇಳಿದ್ದಾರೆ.

ಎನ್‌ಜೆಎಸಿ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಸಂಸತ್ತಿನ ಸಾರ್ವಭೌಮತ್ವಕ್ಕೆ ಸುಪ್ರೀಂ ಕೋರ್ಟ್‌ ಧಕ್ಕೆ ತಂದಿದೆ. ಜನಾದೇಶನ್ನು ನಿರ್ಲಕ್ಷಿಸಿದೆ ಎಂದು ಉಪ ರಾಷ್ಟ್ರ‍ಪತಿ ಜಗದೀಪ್‌ ಧನಕರ್ ಅವರು ರಾಜ್ಯಸಭೆಯಲ್ಲಿ ಇತ್ತೀಚೆಗೆ ಹೇಳಿದ್ದರು. ಸುಪ್ರೀಂ ಕೋರ್ಟ್‌, ಈ ಮಾತಿಗೆ ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.