ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ, ಲೇಖಕಿ ದು.ಸರಸ್ವತಿ , ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ನಟಿ ಭಾರತಿ ವಿಷ್ಣುವರ್ಧನ್ , ಹೋಮಿಯೋಪಥಿ ವೈದ್ಯ ಡಾ.ಬಿ.ಟಿ.ರುದ್ರೇಶ್, ಶಿಕ್ಷಣ ತಜ್ಞೆ ಎಚ್.ಎನ್.ಉಷಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು
ಪ್ರಜಾವಾಣಿ ಚಿತ್ರ
ಬೆಂಗಳೂರು: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳು ನಿವೃತ್ತಿಯಾಗಿ 11 ತಿಂಗಳಾಗಿದೆ. ಆದರೆ, ನೂತನ ಕುಲಪತಿಗಳ ನೇಮಕ ಸಂಬಂಧ ಇದುವರೆಗೆ ಶೋಧನಾ ಸಮಿತಿಯೇ ರಚನೆಯಾಗಿಲ್ಲ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ (ಎಂಸಿಯು) ಕುಲಪತಿಯಾಗಿದ್ದ ಪ್ರೊ.ಎಲ್.ಗೋಮತಿ ದೇವಿ, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಶ್ರೀನಿವಾಸ ಬಳ್ಳಿ ಅವರು 2024ರ ನವೆಂಬರ್ 8ರಂದು ನಿವೃತ್ತಿಯಾಗಿದ್ದಾರೆ. ಅಂದಿನಿಂದ ಎರಡೂ ವಿ.ವಿಗಳ ಕುಲಪತಿ ಹುದ್ದೆ ಖಾಲಿ ಇದ್ದು, ಹೊಸಬರ ನೇಮಕ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಕ್ಕಿಲ್ಲ.
ಎಂಸಿಯುನಲ್ಲಿ ಕಳೆದ ನವೆಂಬರ್‌ನಿಂದ ಈ ವರ್ಷದ ಜೂನ್‌ವರೆಗೆ ಪ್ರೊ.ಸಿ.ಉಷಾದೇವಿ, ಪ್ರೊ.ಬಿ.ಕೆ.ಮೀರಾ ಅವರು ಹಂಗಾಮಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರೊ.ಟಿ.ಎಂ.ಮಂಜುನಾಥ ಅವರು ಈ ವರ್ಷದ ಜುಲೈ ಒಂದರಿಂದ ಹಂಗಾಮಿ ಕುಲಪತಿ ಯಾಗಿದ್ದಾರೆ. ಪ್ರೊ.ಫಜೀಹಾ ಸುಲ್ತಾನ ಅವರು ನೃಪತುಂಗ ವಿ.ವಿ.ಯ ಹಂಗಾಮಿ ಕುಲಪತಿಯಾಗಿದ್ದು ಆದಷ್ಟು ಬೇಗ ಕಾಯಂ ಕುಲಪತಿಯ ನೇಮಕ ಮಾಡಬೇಕು ಎಂಬ ಬೇಡಿಕೆ ಶೈಕ್ಷಣಿಕ ವಲಯದಲ್ಲಿ ಕೇಳಿಬಂದಿದೆ.
‘ಕಾಯಂ ಕುಲಪತಿಗಳು ಇಲ್ಲದೆ ಇರುವುದರಿಂದ ಪ್ರಮುಖವಾದ ಆಡಳಿತಾತ್ಮಕ ನಿರ್ಧಾರಗ ಳನ್ನು ತೆಗೆದುಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಸ್ಥಳೀಯರೇ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಸೂಚನೆ/ನಿರ್ದೇಶನಗಳನ್ನು ಸಹೋದ್ಯೋಗಿಗಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಇದು ತಾತ್ಕಾಲಿಕ ಹೊಣೆಗಾರಿಕೆ ಎಂಬುದು ಅವರಿಗೂ ಗೊತ್ತಿರುತ್ತದೆ. ಹೀಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗುವುದಿಲ್ಲ’ ಎಂದು ಕುಲಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊಸ ಯೋಜನೆಗಳು ಜಾರಿಯಾಗಬೇಕಾದರೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಕಾಯಂ ಕುಲಪತಿ ಇರಬೇಕು. ಹಂಗಾಮಿ ಕುಲಪತಿ ದೈನಂದಿನ ಆಡಳಿತ ನೋಡಿಕೊಳ್ಳುತ್ತಾರೆ ಅಷ್ಟೇ. ಅವರಿಂದ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಆದಾಯ ಮೂಲಗಳು ಇರುವುದಿಲ್ಲ. ಶುಲ್ಕ ಹೆಚ್ಚಳ ಮಾಡಲು ಹೋದರೆ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹಂಗಾಮಿ ಕುಲಪತಿ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ, ಕಾಯಂ ಕುಲಪತಿ ಇದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಕೆ ಮೂಲಕ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಅವರು ವಿವರಿಸಿದರು.
‘ಸಾಮಾನ್ಯವಾಗಿ ಹಾಲಿ ಕುಲಪತಿಯ ನಿವೃತ್ತಿಗೂ ಮೊದಲೇ, ಹೊಸ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ರಚಿಸಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ನಿವೃತ್ತಿಯಿಂದ ತೆರವಾಗಿದ್ದ ಐದು ವಿಶ್ವವಿದ್ಯಾಲಯಗಳಿಗೆ ಈಗಾಗಲೇ ಕುಲಪತಿಗಳ ನೇಮಕವಾಗಿದೆ. ಆದರೆ, ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಕ್ರಮಕೈಗೊಳ್ಳದೆ ಇರುವುದು ಸರಿಯಲ್ಲ’ ಎಂದು ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ವಿಲೀನದ ಗುಮ್ಮ!
ಬಿಜೆಪಿ ಸರ್ಕಾರದ ಅವಧಿಯಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದು, ಬಹುತೇಕ ಈಗ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳಿವೆ. ಸಿಬ್ಬಂದಿ, ಅನುದಾನ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆ ಕೆಲವು ತಿಂಗಳುಗಳ ಹಿಂದೆ ಕೇಳಿ ಬಂದಿತ್ತು.
ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ಚರ್ಚೆ ನಡೆದಾಗ, ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆಗ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ವಿಲೀನ ಮಾಡುತ್ತೇವೆ’ ಎಂದು ತಿಳಿಸಿದ್ದರು.
ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ, ಆದರೆ, ಇನ್ನೂ ವರದಿ ನೀಡಿಲ್ಲ. ನೃಪತುಂಗ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದೊಂದಿಗೆ ವಿಲೀನ ಮಾಡಲಾಗುತ್ತದೆ. ಇದರಿಂದಾಗಿಯೇ ಕುಲಪತಿಗಳ ನೇಮಕಕ್ಕೆ ಶೋಧನಾ ಸಮಿತಿ ರಚಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಯಾರಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ನಿಯಮಗಳಿಗೆ ರಾಜ್ಯಪಾಲರ ಒಪ್ಪಿಗೆ
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನಿಯಮಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಈಗ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಾಂತ್ರಿಕವಾಗಿ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು, ಅವರಲ್ಲಿ ವಿಶ್ವವಿದ್ಯಾಲಯದಲ್ಲಿ ಉಳಿಯುವವರು ಯಾರು? ಹೊರಗೆ ಹೋಗುವವರು ಯಾರು? ಎಂಬುದು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.
‘ವಿಶ್ವವಿದ್ಯಾಲಯದಲ್ಲಿ ಉಳಿಯುವ ಅಥವಾ ಹೊರಗೆ ಹೋಗುವ ಆಯ್ಕೆಯ ಅವಕಾಶವನ್ನು ಸಿಬ್ಬಂದಿಗೆ ನೀಡಿದ್ದು, ಅವರು ತಮ್ಮ ಅಭಿಪ್ರಾಯವನ್ನು ತಿಳಿಸಬೇಕಾಗಿದೆ. ಶೇ 75ರಷ್ಟು ಸಿಬ್ಬಂದಿ ವಿಶ್ವವಿದ್ಯಾಲಯದಲ್ಲಿ ಉಳಿಯಲು ನಿರ್ಧರಿಸಿದ್ದಾರೆ’ ಎಂದು ಹಂಗಾಮಿ ಕುಲಪತಿ ಟಿ.ಎಂ.ಮಂಜುನಾಥ್ ತಿಳಿಸಿದರು.
ಮಹಾರಾಣಿ ಕ್ಲಸ್ಟರ್, ನೃಪತುಂಗ ವಿವಿ ಕುಲಪತಿಗಳ ಹುದ್ದೆ 11 ತಿಂಗಳಿಂದ ಖಾಲಿತಡವಾಗಿಯಾದರೂ ವಿವಿ ನಿಯಮಗಳಿಗೆ ಒಪ್ಪಿಗೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರ ಆದಷ್ಟು ಬೇಗ ಶೋಧನಾ ಸಮಿತಿ ರಚಿಸಿ, ಕುಲಪತಿ ನೇಮಕ ಮಾಡಿದರೆ ಅನುಕೂಲವಾಗಲಿದೆ.ಟಿ.ಎಂ.ಮಂಜುನಾಥ್, ಹಂಗಾಮಿ ಕುಲಪತಿ, ಮಹಾರಾಣಿ ಕ್ಲಸ್ಟರ್ ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.