ADVERTISEMENT

ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: ಟೆಕಿ, ಆಟೊ ಚಾಲಕ ಸೆರೆ

ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಪೊಲೀಸರ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 0:30 IST
Last Updated 3 ಜನವರಿ 2026, 0:30 IST
ವಿಜಯಲಕ್ಷ್ಮಿ 
ವಿಜಯಲಕ್ಷ್ಮಿ    

ಬೆಂಗಳೂರು: ನಟ ದರ್ಶನ್ ಅವರ ಪತ್ನಿ, ಹೊಸಕೆರೆಹಳ್ಳಿಯ ನಿವಾಸಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಆಟೊ ಚಾಲಕನನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಚಿಕ್ಕಬಾಣಾವರದ ನಿವಾಸಿ, ಆಟೊ ಚಾಲಕ ಬಿ.ಚಂದ್ರಶೇಖರ್ (45) ಹಾಗೂ ದಾವಣಗೆರೆಯ ನಿವಾಸಿ, ಸಾಫ್ಟ್‌ವೇರ್‌ ಎಂಜಿನಿಯರ್ ನಿತಿನ್ ಬಂಧಿತರು. ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ನಿತಿನ್‌ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

‘ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿತ್ತು. ಬೆಂಗಳೂರು, ದಾವಣಗೆರೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ 16 ಖಾತೆಗಳ ಕುರಿತು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಡಿ.24ರಂದು ದೂರು ನೀಡಿದ್ದರು. ಆ ದೂರಿನ ಮೇರೆಗೆ ಯೋಗಿ ‘ಕಿಚ್ಚ’, ಮಿ.ಅನಾಥ, ಮಹಿ ‘ಕಿಚ್ಚ’, ವಿರಾಟ್ ‘ಕಿಚ್ಚ’ ಹೆಸರಿನಲ್ಲಿದ್ದ ಖಾತೆ ಸೇರಿದಂತೆ 18 ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ದೂರು ದಾಖಲಾದ ಮೇಲೆ ಎಚ್ಚೆತ್ತುಕೊಂಡಿದ್ದ ಆರೋಪಿಗಳು, ಪೋಸ್ಟ್​ ಡಿಲೀಟ್ ಮಾಡಿದ್ದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಐ.ಪಿ ವಿಳಾಸದ ಮೂಲಕ ಆರೋಪಿಗಳ ಮೂಲ ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಅಸಮಾಧಾನ: ‘ಡಿ.24ರಂದು ದೂರು ನೀಡಿದ್ದೆ. ಆದರೂ ತನಿಖೆಯನ್ನು ಚುರುಕುಗೊಳಿಸಿಲ್ಲ. ಆರೋಪಿಗಳನ್ನೂ ಬಂಧಿಸಿಲ್ಲ’ ಎಂದು ಪೊಲೀಸರ ವಿರುದ್ಧ ವಿಜಯಲಕ್ಷ್ಮಿ ಅಸಮಾಧಾನ ಹೊರಹಾಕಿದ್ದರು. ಡಿ.31ರಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಪ್ರಕರಣದ ತನಿಖೆಯ ಸಂಬಂಧ ಮಾಹಿತಿ ಪಡೆದುಕೊಂಡಿದ್ದರು.

‘ನಾನು ಸಲ್ಲಿಸಿದ್ದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಬೇರೆ ಮಹಿಳೆ ನೀಡಿದ ದೂರು ಆಧರಿಸಿ, ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯ ತಂದಿದೆ’ ಎಂದು ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅದರ ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಸೀಮಾಂತ್‌ಕುಮಾರ್ ಸಿಂಗ್‌ 

ಪ್ರಚೋದನೆ ನೀಡಿದ್ದವರ ಪತ್ತೆ: ಪೊಲೀಸ್ ಕಮಿಷನರ್‌

‘ಬಂಧಿತ ಇಬ್ಬರು ಆರೋ‍ಪಿಗಳಿಗೆ ಯಾರು ಪ್ರಚೋದನೆ ನೀಡಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲಾಗುತ್ತಿದೆ. ಅಶ್ಲೀಲವಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ ಕಿಡಿಕೇಡಿಗಳ ವಿರುದ್ಧ ಮಹಿಳೆಯರು ಧೈರ್ಯದಿಂದ ದೂರು ನೀಡಬಹುದು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ತಿಳಿಸಿದರು.

ಪ್ರಕರಣ ಏನು?

ದಾವಣಗೆರೆಯಲ್ಲಿ ಆಯೋಜಿಸಿದ್ದ ‘ಡೆವಿಲ್’ ಸಿನಿಮಾದ ಪ್ರಚಾರದಲ್ಲಿ ‘ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ’ ಎಂದು ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಕರೆ ನೀಡಿದ್ದರು. ಅದಾದ ಮೇಲೆ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.