ಬೆಂಗಳೂರು: ವಿಜಯನಗರದ ಮೆಟ್ರೊ ನಿಲ್ದಾಣದ ಪ್ರವೇಶದ್ವಾರಕ್ಕೆ ಅಡ್ಡಲಾಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.
ಮೆಟ್ರೊ ನಿಲ್ದಾಣದಲ್ಲಿ ಎರಡು ಕಡೆ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಿದ್ದು, 500ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ನಿಲ್ಲಿಸಬಹುದಾಗಿದೆ. ಆದರೂ, ನಿಲ್ದಾಣದ ಎರಡೂ ಕಡೆಯ ಸರ್ವಿಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಈಚಿನವರೆಗೂ ರಸ್ತೆಯ ಬದಿಯಲ್ಲಿ ಮಾತ್ರವೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ವಿಜಯನಗರ ಅಂಚೆ ಕಚೇರಿ ರಸ್ತೆ ಕಡೆಗಿನ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೆಟ್ರೊ ನಿಲ್ದಾಣದ ಪ್ರವೇಶದ್ವಾರದ ಬಳಿ ಒಂದು ವಾರದಿಂದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಮೆಟ್ರೊ ಪ್ರಯಾಣಿಕರು ಓಡಾಡಲು ಜಾಗವೇ ಬಿಡದಂತೆ ಇಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪರಿಣಾಮವಾಗಿ ಪ್ರಯಾಣಿಕರು ವಾಹನಗಳನ್ನು ಸರಿಸಿ, ನಿಲ್ದಾಣಕ್ಕೆ ಪ್ರವೇಶಿಸಬೇಕಿದೆ. ಇಲ್ಲವೇ 150 ಮೀಟರ್‌ನಷ್ಟು ಮುಂದಕ್ಕೆ ಹೋಗಿ ಮತ್ತೊಂದು ಪ್ರವೇಶದ್ವಾರದ ಮೂಲಕ ನಿಲ್ದಾಣಕ್ಕೆ ಹೋಗಬೇಕಿದೆ.
ಈ ಸಮಸ್ಯೆಯನ್ನು ಸಂಬಂಧಿಸಿದ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯ ಗಮನಕ್ಕೆ ತಂದಾಗ, ಹೀಗೆ ನಿಲುಗಡೆ ಮಾಡಿದ ವಾಹನಗಳಿಗೆ ದಂಡ ಹಾಕಿದ್ದೇವೆ ಎಂದರು. ಆದರೆ ಪ್ರವೇಶ ದ್ವಾರದಲ್ಲಿ ವಾಹನಗಳನ್ನು ನಿಲ್ಲಿಸುವುದು ನಿಂತಿಲ್ಲ, ಮೆಟ್ರೊ ಪ್ರಯಾಣಿಕರು ಪರದಾಡುವುದಕ್ಕೂ ಪರಿಹಾರ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.