ADVERTISEMENT

ಬೆಂಗಳೂರು: ವರ್ಚುವಲ್ ಸಿಮ್ಯುಲೇಶನ್ ತರಬೇತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 16:29 IST
Last Updated 3 ಜುಲೈ 2025, 16:29 IST
<div class="paragraphs"><p>ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು</p></div>

ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು

   

ಬೆಂಗಳೂರು: ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು (ಕೆಎಸ್‌ಪಿಸಿ) ಫಾರ್ಮಸಿ ವಿದ್ಯಾರ್ಥಿಗಳಿಗೆ ರೂಪಿಸಿರುವ ವರ್ಚುವಲ್ ಸಿಮ್ಯುಲೇಶನ್ ಆಧಾರಿತ ಔಷಧ ತಯಾರಿಕಾ ತರಬೇತಿಗೆ ನಗರದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಕೆಎಸ್‌ಪಿಸಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ತರಬೇತಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಫಾರ್ಮಸಿಸ್ಟ್‌ಗಳು ಮತ್ತು ಫಾರ್ಮಸಿ ಕಾಲೇಜುಗಳ ಅಧ್ಯಾಪಕರು ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಈ ತರಬೇತಿ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಪಿಸಿ ರಿಜಿಸ್ಟ್ರಾರ್ ಸಿರ್ಸೆ ಕ್ರಾಂತಿ ಕುಮಾರ್, ‘ಈ ಅತ್ಯಾಧುನಿಕ ತರಬೇತಿ ಕಾರ್ಯಕ್ರಮವನ್ನು 2ಡಿ ಮತ್ತು 3ಡಿ ವರ್ಚುವಲ್ ರಿಯಾಲಿಟಿ ಹಾಗೂ ‘ಎಕ್ಸ್‌ಟೆಂಡೆಡ್ ರಿಯಾಲಿಟಿ’ ತಂತ್ರಜ್ಞಾನಗಳ ಮೂಲಕ ರೂಪಿಸಲಾಗಿದೆ. ತರಬೇತಿ ಘಟಕವು ಔಷಧ ತಯಾರಿಕೆಯಲ್ಲಿನ ಅಗತ್ಯ ಪ್ರಕ್ರಿಯೆಗಳಾದ ಔಷಧ ಸಂಯೋಜನೆ, ಗುಣಮಟ್ಟ ನಿಯಂತ್ರಣ, ಪ್ಯಾಕೇಜಿಂಗ್, ತಯಾರಿಕಾ ವಿಧಾನ ಮೊದಲಾದವುಗಳ ವಾಸ್ತವಿಕ ಅನುಭವದೊಂದಿಗೆ, ವರ್ಚುವಲ್ ಮೂಲಕ ಕಲಿಕೆಯ ಅವಕಾಶವನ್ನು ನೀಡುತ್ತದೆ’ ಎಂದು ಹೇಳಿದರು. 

ಕೆಎಸ್‌ಪಿಸಿ ಕೌಶಲಾಭಿವೃದ್ಧಿ ಕೇಂದ್ರದ ಸಂಯೋಜಕಿ ಸಲ್ಮಾ ಖಾನಂ, ‘2ಡಿ ಹಾಗೂ 3ಡಿ ಸಿಮ್ಯುಲೇಶನ್ ತಂತ್ರಜ್ಞಾನಗಳ ಸಂಯೋಜನೆಯ ಮೂಲಕ ಈ ಕಾರ್ಯಕ್ರಮವು ಶಾಲಾ ಅಧ್ಯಯನ ಮತ್ತು ಕೈಗಾರಿಕಾ ಅನುಭವಗಳ ನಡುವಿನ ಅಂತರ ಸರಿಪಡಿಸಲಿದೆ. ವಿದ್ಯಾರ್ಥಿಗಳು ಉಪಕರಣಗಳ ಬಳಕೆ ಹಾಗೂ ನಿಯಮಾನುಸಾರ ಕಾರ್ಯಾಚರಣೆ ಕುರಿತು ಪ್ರಾಯೋಗಿಕ ಮತ್ತು ಸುರಕ್ಷಿತವಾದ ತರಬೇತಿ ಪಡೆಯಲು ನೆರವಾಗಲಿದೆ’ ಎಂದರು.

ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.