ಎಸ್.ವಿ.ರಾಜೇಂದ್ರಸಿಂಗ್ ಬಾಬು
ಬೆಂಗಳೂರು: ‘ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ಡಾ. ವಿಷ್ಣು ಸೇನಾ ಸಮಿತಿಯು ಆಯೋಜಿಸುತ್ತಿರುವ ‘ಯಜಮಾನ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ವಿಷ್ಣುವರ್ಧನ್ ಅವರ ಆಪ್ತರನ್ನೆಲ್ಲ ಆಹ್ವಾನಿಸಲಾಗುತ್ತದೆ’ ಎಂದು ಸಿನಿಮಾ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ತಿಳಿಸಿದರು.
‘ಯಜಮಾನ ಅಮೃತ ಮಹೋತ್ಸವ’ ಕಾರ್ಯಕ್ರಮದ ಆಯೋಜನೆ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅಮೃತ ಮಹೋತ್ಸವಕ್ಕೆ ಹಿಂದಿ, ತಮಿಳು, ಮಲಯಾಳ, ತೆಲುಗು ಚಿತ್ರರಂಗದ ಖ್ಯಾತ ನಟರನ್ನು ಆಹ್ವಾನಿಸಲಾಗುವುದು’ ಎಂದು ತಿಳಿಸಿದರು.
ಅಮೃತ ಮಹೋತ್ಸವದ ನೇತೃತ್ವ ವಹಿಸಿರುವ ಸಿನಿಮಾ ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, ‘ಈ ಅಮೃತ ಮಹೋತ್ಸವವನ್ನು ಅರಮನೆ ಮೈದಾನದಲ್ಲಿ ಎರಡು ದಿನ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡದ ಸಮಸ್ತ ಚಿತ್ರರಂಗ ಭಾಗವಹಿಸುವ ವಿಶ್ವಾಸವಿದೆ’ ಎಂದರು.
ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ‘ಕಾರ್ಯಕ್ರಮಕ್ಕೆ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಬೂಸ್ಟರ್ ಡೋಸ್ ಕಾರ್ಯಕ್ರಮವಾಗಿ ಕೆಲಸ ಮಾಡಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ನಿರ್ಮಾಪಕ ರಮೇಶ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.