ADVERTISEMENT

ವಿಶ್ವೇಶ್ವರಯ್ಯ ಬಡಾವಣೆ: ಸೌಲಭ್ಯಗಳು ಕಾಣೆ!

ಮನೆಗೆ ನುಗ್ಗುವ ವಿಷಜಂತುಗಳು l ಅಟ್ಟಾಡಿಸಿಕೊಂಡು ಬರುವ ಬೀದಿನಾಯಿಗಳು

ಭೀಮಣ್ಣ ಮಾದೆ
Published 2 ಜನವರಿ 2019, 20:15 IST
Last Updated 2 ಜನವರಿ 2019, 20:15 IST
ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ (ಎಡಚಿತ್ರ) ಬಡಾವಣೆಯ ರಸ್ತೆಯ ಮೇಲೆ ತ್ಯಾಜ್ಯ ಸುರಿಯಲಾಗಿದೆ
ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ (ಎಡಚಿತ್ರ) ಬಡಾವಣೆಯ ರಸ್ತೆಯ ಮೇಲೆ ತ್ಯಾಜ್ಯ ಸುರಿಯಲಾಗಿದೆ   

ಬೆಂಗಳೂರು: ಮೂಗು ಮುಚ್ಚಿಕೊಳ್ಳುವಂತೆ ಮಾಡುವ ಕಸದದುರ್ಗಂಧ,ಪೊದೆಗಳಿಂದ ರಸ್ತೆಗೆ ಬಿದ್ದು ದುತ್ತನೆ ಎದುರಾಗುವ ವಿಷಜಂತುಗಳು, ಅಟ್ಟಾಡಿಸಿಕೊಂಡು ಬರುವ ಬೀದಿನಾಯಿಗಳು, ಹಲವು ವರ್ಷಗಳಿಂದ ಟಾರನ್ನೇ ಕಾಣದ ರಸ್ತೆಗಳು...

ಇದುಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಗೆ ಹೊಂದಿಕೊಂಡಂತೆ 1800 ಎಕರೆಯಲ್ಲಿಬಿಡಿಎ ನಿರ್ಮಿಸಿರುವಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆಯ ಚಿತ್ರಣ.

ಕೆಲ ದುಷ್ಕರ್ಮಿಗಳು ಮಾರುತಿ ನಗರದ ಕಡೆಯಿಂದ ಕೋಳಿ ಹಾಗೂ ಕಟ್ಟಡ ತ್ಯಾಜ್ಯವನ್ನು ವಾಹನದಲ್ಲಿ ತಂದು ಬಡಾವಣೆಯ ರಸ್ತೆಗಳ ಮೇಲೆ ಸುರಿಯುತ್ತಾರೆ. ಅಲ್ಲದೆ, ಪಾಲಿಕೆ ಗುತ್ತಿಗೆದಾರರು ಸಹ ಈ ಪ್ರದೇಶದಲ್ಲಿಯೇಕಸ ಸುರಿಯುತ್ತಾರೆ. ಆದ್ದರಿಂದ ಈ ಪ್ರದೇಶದಲ್ಲಿ ಹಂದಿ ಹಾಗೂ ಬೀದಿನಾಯಿಗಳ ಉಪದ್ರವ ಹೆಚ್ಚಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ತ್ಯಾಜ್ಯದ ದುರ್ವಾಸನೆ ಗಾಳಿಯಲ್ಲಿ ಸೇರಿ ಎಲ್ಲೆಡೆ ಹರಡುತ್ತಿದೆ. ಇದರಿಂದಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ನಿವಾಸಿಗಳಿಗೆರೋಗದ ಭೀತಿ ಎದುರಾಗಿದೆ.

ಇಲ್ಲಿಯ ರಸ್ತೆಗಳ ಕಥೆಯೂ ಇದಕ್ಕೆ ಹೊರತಾಗಿಲ್ಲ. ಆದಿಲಕ್ಷ್ಮೀ ದೊಡ್ಡಮ್ಮತಾಯಿ ದೇವಸ್ಥಾನದ ಪಕ್ಕದಲ್ಲಿ ಸಾಗುವ 1ನೇ ಹಂತದ ಮುಖ್ಯರಸ್ತೆಯ ನೀಲಗಿರಿ ತೋಪಿನ ಪಕ್ಕದ ತಿರುವಿನಲ್ಲಿ ಗುಂಡಿ ಬಿದ್ದಿದೆ. ಇದರಿಂದ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ. ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಗಳಿಲ್ಲದ ಕಾರಣ ಬಾಯ್ದೆರೆದುಕೊಂಡಿವೆ. ತಿರುಗಾಡುವವರು ಸ್ವಲ್ಪ ಮೈಮರೆತರೂ ಅಪಾಯ ತಪ್ಪಿದ್ದಲ್ಲ!

ಸುತ್ತಲಿನವಸತಿ ಸಂಕೀರ್ಣಗಳ ಕೊಳಚೆ ನೀರು ಬಡಾವಣೆಗೆ ಹೊಂದಿಕೊಂಡಂತೆ ಇರುವ ಕೆಂಗೇರಿ ಉಪನಗರದ ‘ಹೊಸ ಕೆರೆ’ಗೆ ಸೇರುತ್ತಿದೆ. ಆದ್ದರಿಂದ ಕೆರೆಯಲ್ಲಿಯನೀರು ಕಲುಷಿತಗೊಂಡು ದುರ್ವಾಸನೆ ಹರಡುತ್ತಿದೆ. ಮುಂದಿನ ದಿನಗಳಲ್ಲಿಕೊಳವೆ ಬಾವಿಯ ಅಂತರ್ಜಲವೂ ಕಲುಷಿತಗೊಳ್ಳಬಹುದು ಎನ್ನುವ ಆತಂಕ ಸ್ಥಳೀಯರಲ್ಲಿ ಮೂಡಿದೆ. ಇಲ್ಲಿಯ 1ನೇ ಹಂತದ ಒಳಚರಂಡಿ ವ್ಯವಸ್ಥೆ ಪೂರ್ಣಗೊಂಡಿದೆ. ಆದರೆ, ಇದನ್ನುಮುಖ್ಯ ಚರಂಡಿಗೆ ಸಂಪರ್ಕ ಮಾಡದೆ ತೋಟವೊಂದರ ಬಳಿ ಬಿಡಲಾಗಿದೆ. ಕೊಳಚೆನೀರು ಅಲ್ಲಿಯೇ ಸಂಗ್ರಹವಾಗಿ ಸುತ್ತಲಿನ ಪ್ರದೇಶವನ್ನು ಮಲೀನಗೊಳಿಸಿದೆ. ತೋಟದ ಮಾಲೀಕ ಮತ್ತು ನಿವಾಸಿಗಳ ನಡುವಿನ ಮಾತಿನ ಚಕಮಕಿಗೂ ಈ ವಿಷಯ ಕಾರಣವಾಗಿದೆ.

ಸ್ಥಳೀಯರನ್ನು ಮಾತಿಗೆಳೆದಾಗಬಡಾವಣೆಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಯ ಪ‌ಕ್ಕದಲ್ಲಿ ಗಿಡಗಂಟಿ ಹಾಗೂ ಪೊದೆಗಳು ದಟ್ಟವಾಗಿ ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ಹಾವು, ಚೇಳುಗಳು ಮನೆಗೆ ನುಗ್ಗುತ್ತಿವೆ. ಆದ್ದರಿಂದಮಕ್ಕಳು ಭಯದಿಂದ ತಿರುಗಾಡುತ್ತಾರೆ ಎಂದು ಹೇಳುತ್ತಾರೆ.

ಬಡಾವಣೆಯ ಕೆಲವು ಭಾಗಗಳಲ್ಲಿ ಬಸ್‌ ತಂಗುದಾಣದ ವ್ಯವಸ್ಥೆ ಮಾಡಬೇಕು ಎನ್ನುವ ನಮ್ಮ ಮನವಿ ಪತ್ರ ಬಿಎಂಟಿಸಿ ಕಚೇರಿಯಲ್ಲಿ ಕೊಳೆಯುತ್ತಾ ಬಿದ್ದಿದೆಯೇ ಹೊರತು ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದು ನೋವಿನಿಂದ ವಿವರಿಸುತ್ತಾರೆ ಅವರು.

ವಿಶ್ವೇಶ್ವರಯ್ಯ ಬಡಾವಣೆ ಸಿಟಿಜನ್ಸ್‌ ಫೋರಂ ಸಂಘಟನೆ ವತಿಯಿಂದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಬಿಬಿಎಂಪಿ, ಪೊಲೀಸ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.