ADVERTISEMENT

ವಿವೇಕ ದೀಪ್ತಿ ಸಮಾವೇಶ: ವಿಜ್ಞಾನಕ್ಕೆ ವೇದಾಂತ ಸ್ಪರ್ಶ ನೀಡುವ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 20:26 IST
Last Updated 29 ಜನವರಿ 2026, 20:26 IST
<div class="paragraphs"><p>ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ವೇದಾಂತ ಭಾರತಿ ಆಯೋಜಿಸಿರುವ ವಿವೇಕದೀಪ್ತಿ ಹಾಗೂ ದಕ್ಷಿಣಾಸ್ಯದರ್ಶಿನೀ ಪ್ರದರ್ಶನದಲ್ಲಿ&nbsp;ವೇದಾಂತ ಭಾರತಿ ಟ್ರಸ್ಟಿ ಲಕ್ಷ್ಮೀಶ, ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಲೇಖಕ ವಿಕ್ರಮ್ ಸಂಪತ್,&nbsp; ಬ್ರಹ್ಮಾನಂದಭಾರತಿ ಸ್ವಾಮೀಜಿ, ಶಂಕರಭಾರತಿ ಸ್ವಾಮೀಜಿ ಅವರು ಅನಂತ ಬಾವಿ ವೀಕ್ಷಿಸಿದರು. </p></div>

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ವೇದಾಂತ ಭಾರತಿ ಆಯೋಜಿಸಿರುವ ವಿವೇಕದೀಪ್ತಿ ಹಾಗೂ ದಕ್ಷಿಣಾಸ್ಯದರ್ಶಿನೀ ಪ್ರದರ್ಶನದಲ್ಲಿ ವೇದಾಂತ ಭಾರತಿ ಟ್ರಸ್ಟಿ ಲಕ್ಷ್ಮೀಶ, ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಲೇಖಕ ವಿಕ್ರಮ್ ಸಂಪತ್,  ಬ್ರಹ್ಮಾನಂದಭಾರತಿ ಸ್ವಾಮೀಜಿ, ಶಂಕರಭಾರತಿ ಸ್ವಾಮೀಜಿ ಅವರು ಅನಂತ ಬಾವಿ ವೀಕ್ಷಿಸಿದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಮಕ್ಕಳು ಮೂಲ ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನದ ಪ್ರಯೋಗಗಳ ವಿವರಣೆ ನೀಡುತ್ತಾರೆ. ಧಾರ್ಮಿಕ ವಿವೇಕ ಸಾರುವ ಸ್ತೋತ್ರಗಳನ್ನು ವಿಜ್ಞಾನದ ಹಿನ್ನೆಲೆಯಲ್ಲಿ ತಿಳಿಸಿಕೊಡುತ್ತಾರೆ.

ADVERTISEMENT

ಇದು ಭಾರತದ ಜ್ಞಾನ ಪರಂಪರೆಯಡಿ ಅನುಭವಾತ್ಮಕ ಕಲಿಕೆ, ವೈಜ್ಞಾನಿಕ ಅನ್ವೇಷಣೆ ಹಾಗೂ ಸಮೂಹ ಚಿಂತನೆಗೆ ಒತ್ತು ನೀಡುವ ‘ದಕ್ಷಿಣಾಸ್ಯ ದರ್ಶಿನಿ’ ಎನ್ನುವ ವಿಶಿಷ್ಟ ವಸ್ತುಪ್ರದರ್ಶನದ ನೋಟ.

ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಅಷ್ಟಕದ ತತ್ವಗಳನ್ನು ಆಧರಿಸಿ ಕೆ.ಆರ್. ನಗರದ ಯಡತೊರೆ ಯೋಗಾನಂದ ಸರಸ್ವತಿ ಮಠದ ವೇದಾಂತ ಭಾರತಿ, ಪರಂ ಫೌಂಡೇಷನ್‌  ಅರಮನೆ ಮೈದಾನದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ನಾಲ್ಕು ದಿನಗಳ ವಿವೇಕ ದೀಪ್ತಿ ಸಮಾವೇಶದಲ್ಲಿ ವಸ್ತು ಪ್ರದರ್ಶನ ಆಕರ್ಷಿಸುತ್ತಿದೆ.

ನೋಡಿದಷ್ಟು ಮುಗಿಯದ ಅನಂತ ಬಾವಿ, ರೋಬೊಟ್‌ ಜತೆಗೆ ದೆವ್ವದ ಕೈಗಳು, ಪಂಚಭೂತ ಯಂತ್ರ, ಭಾರತೀಯ ಜ್ಞಾನ ವ್ಯವಸ್ಥೆಯ ಮಾದರಿಗಳು, ರಸಾಯನ ವಿಜ್ಞಾನದ ಪ್ರಯೋಗ, ಯೋಗ, ನರ ವಿಜ್ಞಾನ ಚಟುವಟಿಕೆ, ಮ್ಯಾಜಿಕ್‌ ಶೋ ವೀಕ್ಷಣೆಗೂ ಇಲ್ಲಿ ಅವಕಾಶವಿದೆ.

ನಗರದ 50ಕ್ಕೂ ಅಧಿಕ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ವಿಜ್ಞಾನವನ್ನು ಸ್ತೋತ್ರದ ತಾತ್ಪರ್ಯದೊಂದಿಗೆ ನೋಡುವ ಪ್ರಯತ್ನ ಮಾಡಿದ್ದಾರೆ. ಪ್ರಯೋಗದ ವಿವರಣೆ ನೀಡುತ್ತಲೇ ವೀಕ್ಷಕರ ಅನುಮಾನಗಳಿಗೂ ವಿದ್ಯಾರ್ಥಿಗಳು ಉತ್ತರ ನೀಡುತ್ತಾರೆ. ಇತ್ತೀಚಿನ ರೋಬೊಟಿಕ್‌ ತಂತ್ರಜ್ಞಾನ, ಚಿಪ್‌ಗಳ ಬಳಕೆ, ರಾಮನ್ ಪರಿಣಾಮ, ತತ್ವ ಆಧಾರಿತ ಎಐ ಹಾಗೂ ಚಾಟ್‌ಬಾಟ್‌, ಬುದ್ದಿವಂತ ವ್ಯವಸ್ಥೆ ಸಹಿತ ಹಲವು ವಿಜ್ಞಾನದ ಪ್ರಯೋಗಗಳನ್ನು 10 ಸ್ತೋತ್ರಗಳ ಮೂಲಕ ತಿಳಿಸುತ್ತಾರೆ.

ಮಿರಾಸ್ಕೋಪ್‌ ಎನ್ನುವ ದರ್ಪಣ ಪ್ರಯೋಗ, ಮೈಂಡ್‌ ವೀಪಿಂಗ್‌ ಎನ್ವಿರಾನ್‌ಮೆಂಟ್‌ ಎಂಬ ದೇಹ, ಹಸ್ತ, ಮನಸುಗಳ ನಡುವಿನ ನಂಟು, ನೀರಿನ ಆವಿ, ಬಿಸಿನೀರಿನಲ್ಲಿ ತಂತಿಯ ಸ್ವರೂಪ ಬದಲಾಗುವ ಹಿಂದಿನ ಸತ್ಯವನ್ನು ಪ್ರಯೋಗ ಹಾಗೂ ಸ್ತೋತ್ರದೊಂದಿಗೆ ವಿವರಿಸುತ್ತಾರೆ.

‘ವಿಜ್ಞಾನದ ಪ್ರಯೋಗಗಳನ್ನು ಶಾಲಾ ದಿನಗಳಿಂದಲೇ ಮಾಡುತ್ತಾ ಅದನ್ನು ವೈಜ್ಞಾನಿಕವಾಗಿ ನೋಡಲು ಪ್ರಯತ್ನಿಸುತ್ತಿದ್ದೇವೆ. ಶಂಕರರ ಸ್ತೋತ್ರಗಳು ಹೇಗೆ ಶಕ್ತಿ ತುಂಬಬಲ್ಲವು ಎಂಬುದನ್ನು ಇಲ್ಲಿನ ಪ್ರಯೋಗಗಳ ಮೂಲಕ ಅರಿತಿದ್ದೇವೆ’ ಎಂದು ಉಲ್ಲಾಳು ವಿದ್ಯಾನಿಕೇತನ ವಿದ್ಯಾರ್ಥಿನಿಯರಾದ ಪೂರ್ವ, ಸಮನ, ಸಾಯಿಸ್ಮೃತಿ ಅಭಿಪ್ರಾಯ ಹಂಚಿಕೊಂಡರು.

‘ಅಷ್ಟಕದ ತತ್ತ್ವೋಪದೇಶಗಳನ್ನು ವಿದ್ಯಾರ್ಥಿಗಳ ವೈಜ್ಞಾನಿಕ ಪ್ರಯೋಗ, ಅನುಭವಾತ್ಮಕ ಕಲಿಕಾ ಮಾದರಿ ಮೂಲಕ ವಿವರಿಸುವ ಪ್ರದರ್ಶನ ಮೊದಲ ಬಾರಿಗೆ ಆಯೋಜನೆಗೊಂಡಿದೆ. ಗಂಭೀರ ತತ್ತ್ವಚಿಂತನೆಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಗ್ರಹಿಸಲೆಂದು ಪ್ರದರ್ಶನ ವಿನ್ಯಾಸಗೊಳಿಸಲಾಗಿದೆ’ ಎಂದು ಪರಂ ಫೌಂಡೇಷನ್‌ನ ಮುಖ್ಯಸ್ಥ ಶ್ರೀನಿವಾಸ ಗುಪ್ತ ತಿಳಿಸಿದರು.

ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವರಣೆ ನೀಡಿದರು. 

Cut-off box - ‘ಸತ್ಯಾನ್ವೇಷಣೆಯೇ ಧರ್ಮ ವಿಜ್ಞಾನದ ಆಶಯ’ ‘ಮಾನವನ ಶ್ರೇಷ್ಠತೆಗಾಗಿ ಶ್ರಮಿಸುವ ಧಾರ್ಮಿಕ ವಲಯ ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುವ ವಿಜ್ಞಾನ ವಲಯದ ಉದ್ದೇಶ ಸತ್ಯಾನ್ವೇಷಣೆಯೇ ಆಗಿದ್ದು ವಿಜ್ಞಾನ ನಮ್ಮ ಬದುಕನ್ನು ಇನ್ನಷ್ಟು ಉತ್ತಮಗೊಳಿಸಲಿ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ. ರಾಷ್ಟ್ರಮಟ್ಟದ ವಿವೇಕ ದೀಪ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ಸಾವಿರಾರು ವರ್ಷಗಳಿಂದ ವಿಜ್ಞಾನ ನಮ್ಮ ಬದುಕನ್ನು ಸುಧಾರಿಸುತ್ತಲೇ ಬರುತ್ತಿದೆ. ಮೂಲ ವಿಜ್ಞಾನದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಜನರ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುವಂತಾಗಬೇಕು’ ಎಂದು ಹೇಳಿದರು. ‘ಹಲವು ದೇಶಗಳ ವಿಜ್ಞಾನಿಗಳು ಕಣಗಳು ಭೂಮಂಡಲದ ಕುರಿತು ಸಂಶೋಧನೆ ನಡೆಸಿದರು. ಈಗಲೂ ಜಲಜನಕ ಅಣುಬಾಂಬ್‌ನ ಸಂಶೋಧನೆಗಳು ನಡೆದಿವೆ. ವಿಜ್ಞಾನದ ಹಿಂದೆ ಧಾರ್ಮಿಕ ಚಿಂತನೆಗಳ ಅಡಿಪಾಯವೂ ಇದೆ. ಋಷಿಮುನಿಗಳು ತಪಸ್ಸಿನ ಮೂಲಕ ಸಾಧನೆ ಮಾಡಿದರೆ ವಿಜ್ಞಾನಿಗಳು ಸಂಶೋಧನೆಯನ್ನು ಏಕಾಗ್ರತೆಯಿಂದ ಕೈಗೊಳ್ಳುತ್ತಾರೆ. ಭಾರತದ ಪರಂಪರೆ ಆಗಿನ ಚಿಂತನೆಗಳಲ್ಲಿರುವ ವೈಜ್ಞಾನಿಕ ಮನೋಭಾವದೊಂದಿಗೆ ವಿಜ್ಞಾನವನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು. ಯಡತೊರೆ ಮಠದ ಶಂಕರ ಭಾರತಿ ಸ್ವಾಮೀಜಿ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಇತಿಹಾಸಕಾರ ವಿಕ್ರಂ ಸಂಪತ್‌  ಟ್ರಸ್ಟಿ ನಾಗಾನಂದ ವಕೀಲ ಅಶೋಕ ಹಾರನಹಳ್ಳಿ ಉಪಸ್ಥಿತರಿದ್ದರು. ವಿಜ್ಞಾನ ಧರ್ಮ ಕುರಿತಂತೆ ವೇದಾಂತ ಭಾರತಿ ಮತ್ತು ಪರಂ ಫೌಂಡೇಷನ್ ನಡುವೆ ಒಡಂಬಡಿಕೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.