ADVERTISEMENT

ಬೆಳಕು ಬಿತ್ತರಿಸಿದ ವಿವೇಕ ದೀಪಿನೀ

ಭಾರತೀಯತೆಯ ಸಮನ್ವಯಕಾರ ಶಂಕರಾಚಾರ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 21:38 IST
Last Updated 18 ಜನವರಿ 2020, 21:38 IST
ವೇದಾಂತ ಭಾರತೀ ಸಂಸ್ಥೆಯು ಶನಿವಾರ ಆಯೋಜಿಸಿದ್ದ ವಿವೇಕದೀ‍‍‍ಪಿನೀ ಸಮರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ, ಯಡತೊರೆ ಮಠದ ಶಂಕರಭಾರತೀ ಸ್ವಾಮೀಜಿ, ಸಂಚಾಲನಾ ಸಮಿತಿಯ ಅಧ್ಯಕ್ಷ ಎಸ್‌.ಎಸ್‌. ನಾಗಾನಂದ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ವೇದಾಂತ ಭಾರತೀ ಸಂಸ್ಥೆಯು ಶನಿವಾರ ಆಯೋಜಿಸಿದ್ದ ವಿವೇಕದೀ‍‍‍ಪಿನೀ ಸಮರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ, ಯಡತೊರೆ ಮಠದ ಶಂಕರಭಾರತೀ ಸ್ವಾಮೀಜಿ, ಸಂಚಾಲನಾ ಸಮಿತಿಯ ಅಧ್ಯಕ್ಷ ಎಸ್‌.ಎಸ್‌. ನಾಗಾನಂದ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ಎಲ್ಲೆಲ್ಲೂ ಮಕ್ಕಳು; ಒಬ್ಬರಲ್ಲ, ಇಬ್ಬರಲ್ಲ; ಸುಮಾರು 500 ಪ್ರೌಢಶಾಲೆಯಿಂದ ಎರಡು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು. ಎಲ್ಲರೂ ಶಿಸ್ತಿನಿಂದ ಅಷ್ಟೇ ಅಲ್ಲ, ಭಕ್ತಿ ಭಾವದಿಂದಲೂ ಕುಳಿತಿದ್ದರು. ಹೊಸದಾದ ಕಲಿಕೆಯನ್ನು ಕಲಿತಿದ್ದೇವೆ ಎಂಬ ಸಾರ್ಥಕ ಭಾವವೂ ಎಲ್ಲರ ಮುಖದಲ್ಲಿ ಕಾಣುತ್ತಿತ್ತು.

ಈ ಮನಮೋಹಕ ದೃಶ್ಯ ಅನಾವರಣವಾದದ್ದು ಬೆಂಗಳೂರು ಅರಮನೆಯ ಮೈದಾನದಲ್ಲಿ. ಸಂದರ್ಭ: ವೇದಾಂತ ಭಾರತೀ ಸಂಸ್ಥೆ ಆಯೋಜಿಸಿದ್ದ ವಿವೇಕ ದೀಪಿನೀ ಮಹಾಸಮರ್ಪಣೆಯ ಕಾರ್ಯಕ್ರಮ.

ಬೃಹತ್ ವೇದಿಕೆಯ ಮೇಲಿನಿಂದ ಪ್ರಶ್ನೆಯ ರೂಪದ ಮಾತೊಂದು ತೂರಿಬಂತು. ಅದಕ್ಕೆ ಉತ್ತರವಾಗಿ ಅಲ್ಲಿ ಲಕ್ಷಾಂತರ ದನಿಗಳು ಮೊಳಗಿದವು. ವಿದ್ಯಾರ್ಥಿಗಳು ಸಾಮಾನ್ಯವಾಗಿ ಉತ್ತರ ಹೇಳಲು ಹಿಂಜರಿಯುವುದುಂಟು. ಆದರೆ ಅಲ್ಲಿ ಯಾರಲ್ಲೂ ಹಿಂಜರಿಕೆಯೇ ಇಲ್ಲ. ಪ್ರಶ್ನೆ ಕೇಳಿದ ಕೂಡಲೇ ಉತ್ತರ ಸಿದ್ಧ. ಪ್ರಶ್ನೆ ಇರುತ್ತಿದ್ದುದು ಕನ್ನಡಲ್ಲೋ ಇಂಗ್ಲಿಷಿನಲ್ಲೋ ಅಲ್ಲ, ಸಂಸ್ಕೃತದಲ್ಲಿ. ಅದಕ್ಕೆ ಮಕ್ಕಳಿಂದ ಉತ್ತರವೂ ಸಂಸ್ಕೃತದಲ್ಲಿಯೇ!

ADVERTISEMENT

ಶಂಕರಾಚಾರ್ಯರ ಕೃತಿಗಳಲ್ಲೊಂದಾದ ಪ್ರಶ್ನೋತ್ತರ ರತ್ನಮಾಲಿಕಾದ ಸಂಗ್ರಹ ವಿವೇಕ ದೀಪಿನೀ.

ವಿವೇಕ ದೀಪಿನಿಯ ಸಾಮೂಹಿಕ ಪಠಣೆಗೆ ಸೇರಿದ್ದ ಈ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುವಂತೆ ಶ್ಲೋಕಗಳನ್ನು ನಾಲ್ಕಾರು ತಿಂಗಳು ಕಂಠಸ್ಥ ಮಾಡಿದ್ದರು. ಮುಂದೆ ಎದುರಾಗುವ ಜೀವನ ಎಂಬ ಪರೀಕ್ಷೆಗೆ ಒದಗುವ ಉತ್ತರಗಳು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಸಿದ್ಧಗೊಳಿಸಿದ್ದ ಸಾವಿರಾರು ಶಿಕ್ಷಕರಲ್ಲೂ ಧನ್ಯತೆಯ ಭಾವ ಇಣುಕುತ್ತಿತ್ತು. ತಮ್ಮ ಮಕ್ಕಳ ಈ ಪ್ರಶ್ನೋತ್ತರದ ಜುಗಲ್‌ಬಂದಿಯನ್ನು ಕಾಣಲು ಪೋಷಕರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವಿದ್ವಾಂಸ ಯಾರು– ಎಂದು ವೇದಿಕೆಯಿಂದ ಪ್ರಶ್ನೆ ಬಂದರೆ, ‘ವಿವೇಕಿಯೇ ನಿಜವಾದ ವಿದ್ವಾಂಸ’ ಎಂಬ ಮಾರುತ್ತರ ಸಾವಿರ ಸಾವಿರ ಏಕಕಂಠದಲ್ಲಿ ಬೋರ್ಗರೆಯಿತು.

ಶಂಕರರ ಗುಣಗಾನ: ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಭಾರತದಲ್ಲಿದ್ದ ಹಲವು ಪಂಥಗಳ ಮಧ್ಯೆ ಸಮನ್ವಯ ಸ್ಥಾಪಿಸಿದಆದಿ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿ ಇಂದಿನವರೆಗೂ ಜೀವಂತ
ವಾಗಿರುವುದಕ್ಕೆ ಕಾರಣರಾಗಿದ್ದಾರೆ’ ಎಂದು ಬಣ್ಣಿಸಿದರು.

ಬೌದ್ಧ–ಹಿಂದೂ ಧರ್ಮಗಳ ಸಂಘರ್ಷವನ್ನು ನಿಲ್ಲಿಸಿದ ಅವರು, ಗಿರಿ, ಅರಣ್ಯ, ತೀರ್ಥ – ಹೀಗೆ ಹತ್ತು ಹೆಸರುಗಳ (ದಶನಾಮಿ ವ್ಯವಸ್ಥೆ) ಮೂಲಕ ಸೃಷ್ಟಿಯ ವಿವರಗಳೊಂದಿಗೆ ಆಧ್ಯಾತ್ಮಿಕ ಮಾರ್ಗವನ್ನು ಸಮನ್ವಯಗೊಳಿಸಿದರು. ವಿವೇಕ ದೀಪಿನಿಯಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದಿಗೂ ಸನ್ಮಾರ್ಗದಿಂದ ದೂರ ಸರಿಯುವುದಿಲ್ಲ ಎಂದರು.

ಅಲಂಕಾರ ಯಾವುದು – ಎಂಬ ಪ್ರಶ್ನೆಗೆ ವಿವೇಕ ದೀಪಿನೀ ಸಚ್ಚಾರಿತ್ರ್ಯವೇ ಅಲಂಕಾರ ಎಂದಿದೆ. ಮಕ್ಕಳಿಗೆ ಬೇಕಾಗಿರುವುದು ಇಂಥ ಜ್ಞಾನ. ಸಮಗ್ರ ಸೃಷ್ಟಿಗೆ ತಮ್ಮ ಜೀವನವನ್ನು ಸಮರ್ಪಿಸಬೇಕು ಎಂಬ ಮೌಲ್ಯ ಮಕ್ಕಳಲ್ಲಿ ಮೂಡಲು ವಿವೇಕದೀಪಿನಿಯ ಅಧ್ಯಯನ ನೆರವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರಭಾರತೀ ಸ್ವಾಮೀಜಿ , ವಿವೇಕ ದೀಪಿನಿಯಲ್ಲಿರುವ ಮೌಲ್ಯಗಳು ಯಾವುದೋ ವ್ಯಕ್ತಿ–ಕಾಲಕ್ಕೆ ಮಾತ್ರವೇ ಸೀಮಿತವಾದುದಲ್ಲ; ಜೀವನಪರ್ಯಂತ ಎಲ್ಲರಿಗೂ ಬೇಕಾದಂಥವು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಸಂಚಾಲನ ಸಮಿತಿಯ ಅಧ್ಯಕ್ಷರಾದ ಹಿರಿಯ ವಕೀಲ ಎಸ್‌. ಎಸ್‌. ನಾಗಾನಂದ ಓದಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಾಲ್ಗೊಂಡಿದ್ದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿವೇಕ ದೀ‍‍‍ಪಿನೀ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾಮೂಹಿಕ ಪಠಣದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಹಾಗೂ ಶಿಕ್ಷಕಿಯರು

ವಿದ್ಯಾರ್ಥಿಗಳ ಉತ್ಸಾಹ, ಅಚ್ಚುಕಟ್ಟಾದ ವ್ಯವಸ್ಥೆ
ಬೆಂಗಳೂರು:
ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ‘ವಿವೇಕ ದೀಪಿನೀ’ ಸಾಮೂಹಿಕ ಪಠಣಕ್ಕೆ ಬಂದಿದ್ದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಉತ್ಸಾಹ ಪುಟಿದೇಳುತ್ತಿತ್ತು. ಬೃಹತ್‌ ಸಭಾಂಗಣದಲ್ಲಿ ಎಲ್ಲಲ್ಲೂ ಮಕ್ಕಳ ಕಲರವ ತುಂಬಿತ್ತು.

ಮೈದಾನಕ್ಕೆ ಬರುತ್ತಲೇಬಿಸಿ ಬೇಳೆಬಾತ್‌, ಅಕ್ಕಿ ಪಾಯಸ ಅವರನ್ನು ಕಾಯುತ್ತಿತ್ತು. ಬಸ್‌ಗಳಿಂದ ಇಳಿದ ವಿದ್ಯಾರ್ಥಿಗಳು ಹೊಟ್ಟೆ ತುಂಬಿಸಿಕೊಂಡೇ ಸಭಾಂಗಣಕ್ಕೆ ಬಂದಿದ್ದರು. ಕೆಲವರು ಮನೆಯಿಂದಲೇ ಬುತ್ತಿ ತಂದಿದ್ದರು.ಸಮವಸ್ತ್ರದಲ್ಲಿ ಬಂದಿದ್ದ ವಿದ್ಯಾರ್ಥಿಗಳನ್ನು ಒಂದೊಂದು ಅಂಕಣದೊಳಗೆ ವ್ಯವಸ್ಥಿತವಾಗಿ ನೆಲಹಾಸಿನ ಮೇಲೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಜತೆಗೆ ಬಂದ ಪೋಷಕರು, ಶಿಕ್ಷಕರು ಸಹ ದೊಡ್ಡ ಸಂಖ್ಯೆಯಲ್ಲಿದ್ದರು. ವೈದ್ಯಕೀಯ ಸಿಬ್ಬಂದಿ, ಸ್ವಯಂಸೇವಕರ ದಂಡೇ ಅಲ್ಲಿತ್ತು.

ಸಭಾಂಗಣ ಎಷ್ಟು ದೊಡ್ಡದಿತ್ತು ಎಂದರೆ, ಬೃಹತ್ ವೇದಿಕೆಯ ಹಿಂಬದಿ ಕುಳಿತವರಿಗೆ ಕಾಣಿಸುತ್ತಲೇ ಇರಲಿಲ್ಲ. ಅವರಿಗಾಗಿಯೇ ವ್ಯವಸ್ಥೆ ಮಾಡಿದ್ದ ಏಳೆಂಟುಬೃಹತ್ ಎಲ್‌ಇಡಿ ಪರದೆಗಳಲ್ಲಿ ವೇದಿಕೆಯ ದೃಶ್ಯ ಮೂಡದ ಕಾರಣ ಸಾವಿರಾರು ಮಂದಿಗೆ ನಿರಾಸೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.