ಬೆಂಗಳೂರು: ಫರ್ಸ್ಟ್ ಸರ್ಕಲ್ ಸೊಸೈಟಿಯು ಇದೇ 19ರಿಂದ 21ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಉದ್ಯಮಿ ಒಕ್ಕಲಿಗ’ ಸಮಾವೇಶ ಹಮ್ಮಿಕೊಂಡಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸೊಸೈಟಿ ಅಧ್ಯಕ್ಷ ನಂದೀಶ ರಾಜೇಗೌಡ, ‘19ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶ ಉದ್ಘಾಟಿಸಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.
‘ನೂತನ ಜಾಲತಾಣವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
‘ಸಮಾವೇಶದಲ್ಲಿ ನೂರಕ್ಕೂ ಅಧಿಕ ಒಕ್ಕಲಿಗ ಉದ್ಯಮಿಗಳ ಮಳಿಗೆಗಳು ಇರಲಿವೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿ ವಿವಿಧ ಕ್ಷೇತ್ರಗಳ ಬಗ್ಗೆ ಚಿಂತನ– ಮಂಥನ ನಡೆಯಲಿದೆ. ಈ ಬಾರಿ ಒಕ್ಕಲಿಗರ ಆಹಾರ ಪದ್ಧತಿ ವಿಶೇಷ ಆಕರ್ಷಣೆಯಾಗಲಿದೆ. ‘ರಾಗಿ ಮುದ್ದೆ ಊಟ’ಕ್ಕೆ ಭೌಗೋಳಿಕ ಸೂಚ್ಯಂಕಕ್ಕೂ (ಜಿಐ ಟ್ಯಾಗ್) ಸಮಾವೇಶದಲ್ಲಿ ಒತ್ತಾಯಿಸಲಾಗುವುದು. 19ರ ಸಂಜೆ ‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ತಮಿಳುನಾಡಿನಿಂದಲೂ ಒಕ್ಕಲಿಗ ಉದ್ಯಮಿಗಳು ಬರಲಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯಕ್ಕಾಗಿ ಪ್ರತ್ಯೇಕ ಚರ್ಚೆ ಹಮ್ಮಿಕೊಳ್ಳಲಾಗುತ್ತದೆ. ಮೂರು ದಿನಗಳ ಸಮಾವೇಶದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಗಂಗವಾಡಿ ರಾಜವಂಶದ ಲಾಂಛನವನ್ನು ಸಮಾವೇಶದ ಆಕರ್ಷಣೆಯಾಗಿ ಬಳಸಿಕೊಳ್ಳಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.