ADVERTISEMENT

ಜಾತಿ ಆಧಾರದಲ್ಲಿ ಮತ ಯಾಚನೆ: ಆಯೋಗದ ಕ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 20:20 IST
Last Updated 28 ನವೆಂಬರ್ 2019, 20:20 IST

ಬೆಂಗಳೂರು: ವೀರಶೈವ ಮತ್ತು ಲಿಂಗಾಯತರು ಬಿಜೆಪಿ ಅಭ್ಯರ್ಥಿಗಳಿಗೇ ಮತ ಹಾಕಬೇಕು ಎಂದು ಮನವಿ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಗೋಕಾಕ ಮತ್ತು ಕಾಗವಾಡ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿವಿಧ ಮಾಧ್ಯಮ ವರದಿಗಳು ಮತ್ತು ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ವಿವರಿಸಿದೆ.

ಮಂಡ್ಯ ಜಿಲ್ಲೆ ಹನಕೆರೆ ಚೆಕ್‌ಪೋಸ್ಟ್‌ನಲ್ಲಿ ನವೆಂಬರ್‌ 20 ರಂದು ಗೃಹ ಸಚಿವರ ವಾಹನವನ್ನು ಪರಿಶೀಲಿಸದಿರುವ ಬಗ್ಗೆ ಕಾಂಗ್ರೆಸ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಅದರ ಆಧಾರದ ಮೇಲೆ ಚೆಕ್‌ಪೋಸ್ಟ್‌ನಲ್ಲಿದ್ದ ಆರು ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ ಮತ್ತು ಕರ್ತವ್ಯ ಲೋಪದ ಮೇಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಚೆಕ್‌ಪೋಸ್ಟ್‌ ಅಧಿಕಾರಿಗಳಿಗೆ ಸಹಕಾರ ನೀಡದ ಗೃಹ ಸಚಿವರ ವಾಹನದ ಚಾಲಕನ ವಿರುದ್ಧವೂ ಮದ್ದೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ADVERTISEMENT

ಹಿರೇಕೆರೂರು ವರಾಹಾ ಚೆಕ್‌ಪೋಸ್ಟ್‌ನಲ್ಲಿ ಇದೇ 25 ರಂದು ಸಂಸದ ಬಿ.ವೈ.ರಾಘವೇಂದ್ರ ಅವರ ವಾಹನ ಪರಿಶೀಲಿಸದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಕಣ್ಗಾವಲು ತಂಡದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಗಳಾದ ಎಂ.ಟಿ.ಬಿ.ನಾಗರಾಜ್‌ ಮತ್ತು ಶರತ್‌ ಬಚ್ಚೇಗೌಡ ಅವರ ಬೆಂಬಲಿಗರ ಹೊಡೆದಾಟದ ಹಿನ್ನೆಲೆಯಲ್ಲಿ ತಿರುಮಲ ಶೆಟ್ಟಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕೆ.ಆರ್‌.ಪೇಟೆ ಟೌನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.