ADVERTISEMENT

ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟನೆ

ಕ್ಲಬ್‌ ರಾಯಭಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:46 IST
Last Updated 3 ಏಪ್ರಿಲ್ 2019, 19:46 IST
ಸಂಜೀವ್‌ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಮತದಾನ ಮಹತ್ವದ ಕುರಿತು ಮಾತುಕತೆ ನಡೆಸಿದರು. ಬಿ.ವಿ.ರವಿಶಂಕರ್, ಮಂಜುನಾಥ್‌ ಪ್ರಸಾದ್, ಎಸ್.ಎಸ್.ನಕುಲ್ ಇದ್ದರು –ಪ್ರಜಾವಾಣಿ ಚಿತ್ರ
ಸಂಜೀವ್‌ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಮತದಾನ ಮಹತ್ವದ ಕುರಿತು ಮಾತುಕತೆ ನಡೆಸಿದರು. ಬಿ.ವಿ.ರವಿಶಂಕರ್, ಮಂಜುನಾಥ್‌ ಪ್ರಸಾದ್, ಎಸ್.ಎಸ್.ನಕುಲ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತದಾನದ ಜಾಗೃತಿ ಮೂಡಿಸಲು ಆರಂಭಿಸಿರುವ 'ಚುನಾವಣಾ ಸಾಕ್ಷರತಾ ಕ್ಲಬ್'ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬುಧವಾರ ಉದ್ಘಾಟಿಸಿದರು.

ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಮತ್ತು ಇಬ್ಬರು ವಿದ್ಯಾರ್ಥಿಗಳು ಈ ಕ್ಲಬ್‌ನ ರಾಯಭಾರಿಗಳಾಗಿ ಕೆಲಸ ಮಾಡಲಿದ್ದಾರೆ. ಸಂವಿಧಾನ, ಚುನಾವಣೆ ಮಹತ್ವ ಮತ್ತು ಮತದಾನ ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸುವುದು ಕ್ಲಬ್ ಉದ್ದೇಶ.

ವಿದ್ಯಾರ್ಥಿಗಳು ಮಾದರಿ ಮತದಾನ ಮಾಡಿ ಮತಯಂತ್ರ ಮತ್ತು ವಿವಿಪ್ಯಾಟ್‌ಗಳ ಮಾಹಿತಿ ಪಡೆದುಕೊಂಡರು.

ADVERTISEMENT

ಸಂಜೀವ್ ಕುಮಾರ್, ‘ಕ್ರಿಕೆಟ್‌ನಲ್ಲಿ ಒಂದು ರನ್‌, ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತದೆ. ಅದೇ ರೀತಿ ಒಂದು ಮತ ಕೂಡ. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆ ಇದೆ. ಆದರೆ, ಮತದಾನದ ವಿಷಯದಲ್ಲಿ ಜನರ ನಿರಾಸಕ್ತಿ ಬೇಸರ ತರಿಸುತ್ತದೆ’ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, 'ಸಾಮಾಜಿಕ ಜಾಲತಾಣದಲ್ಲಿ ಶೇ 100ರಷ್ಟು ಚರ್ಚೆ ಮಾಡುತ್ತಾರೆ. ಮತ‌ ಚಲಾಯಿಸುವವರುಮಾತ್ರ ಅರ್ಧದಷ್ಟು. ನಗರದಲ್ಲಿ ಇಳಿಮುಖವಾಗುತ್ತಿರುವ ಮತದಾನದ ಪ್ರಮಾಣವನ್ನು ಈ ಬಾರಿ ಹೆಚ್ಚಿಸಲು ಯುವಕರು ಮುಂದಾಗಬೇಕು’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಬಿ.ವಿ.ರವಿಶಂಕರ್, 'ಮತದಾನ ಮಾಡುವುದು ನಿಮ್ಮ ಕೆಲಸ. ಯಾರಿಗೆ ಬೇಕಾದರೂ ಮತ ಚಲಾಯಿಸಿ. ಆದರೆ, ಮತದಾನ ಮಾಡದೆ ಸುಮ್ಮನಿರಬೇಡಿ' ಎಂದು ಮನವಿ‌ ಮಾಡಿದರು.‌

‘ಆಸ್ತಿ ವಿವರ ಅಪ್‌ಲೋಡ್‌’

‘ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ನೀಡುವ ಆಸ್ತಿ ಮತ್ತು ಅಪರಾಧ ಪ್ರಕರಣಗಳ ವಿವರವನ್ನು ನಮ್ಮ ವೆಬ್‌ಸೈಟ್‌ನಲ್ಲಿ (www.ceokarnataka.com) ಅಪ್‌ಲೋಡ್ ಮಾಡುತ್ತೇವೆ. ಅದೆಲ್ಲವನ್ನೂ ವೀಕ್ಷಿಸಿ ಉತ್ತಮ ಅಭ್ಯರ್ಥಿಗೆ ಮತದಾನ ಮಾಡಬೇಕು’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.