ADVERTISEMENT

ಬೆಂಗಳೂರು: ನಗರದ ರಸ್ತೆಗಳಲ್ಲಿ ತುಂಬುತ್ತಿದೆ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 16:13 IST
Last Updated 14 ಮಾರ್ಚ್ 2025, 16:13 IST
ಬೆಂಗಳೂರಿನ ಸಜ್ಜನ್ ರಾವ್ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಕಂಡುಬಂದ ಕಸದ ರಾಶಿ
ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸಜ್ಜನ್ ರಾವ್ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಕಂಡುಬಂದ ಕಸದ ರಾಶಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ತುಂಬಿದ 300ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ತಡೆ ಹಾಕಿರುವುದರಿಂದ, ನಗರದ ರಸ್ತೆಗಳಲ್ಲಿ ಕಸ ಹರಡಿಕೊಂಡು ದುರ್ನಾತ ಬೀರುತ್ತಿದೆ.

ಕಾಂಪ್ಯಾಕ್ಟರ್‌ಗಳು ಭೂಭರ್ತಿ ಪ್ರದೇಶದಿಂದ ವಾಪಸ್‌ ಬಾರದೆ, ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ಆಟೊ ಟಿಪ್ಪರ್‌ಗಳಲ್ಲೇ ನಾಲ್ಕು ದಿನಗಳಿಂದ ಉಳಿದಿದೆ. ಹಲವು ಪ್ರದೇಶಗಳಲ್ಲಿ ಮನೆಗಳಿಂದ ಬಿಬಿಎಂಪಿ ವತಿಯಿಂದ ಕಸ ಸಂಗ್ರಹಿಸುತ್ತಿಲ್ಲ.

ಬಸವನಗುಡಿ, ವಿಶ್ವೇಶ್ವರಪುರ, ರಾಜಾಜಿನಗರ, ಗಿರಿನಗರ, ಜಯನಗರ, ರಾಜರಾಜೇಶ್ವರಿನಗರ, ಕೆಂಗೇರಿ, ಆರ್‌.ಟಿ.ನಗರ, ಸಂಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹವಾಗದೆ ರಸ್ತೆಗಳಲ್ಲೇ ಉಳಿದಿತ್ತು. ಮನೆಗಳಿಂದ ತ್ಯಾಜ್ಯ ಸಂಗ್ರಹವಾಗುತ್ತಿಲ್ಲದಿರುವುದರಿಂದ ಕೆಲವು ನಾಗರಿಕರು ತ್ಯಾಜ್ಯವನ್ನು ರಸ್ತೆಗಳಲ್ಲಿ ಎಸೆದಿದ್ದರು.

ADVERTISEMENT

ಮಾತುಕತೆ: ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯಬಾರದು ಎಂದು ಆಗ್ರಹಿಸಿ ಕಣ್ಣೂರು ಗ್ರಾಮ ಪಂಚಾಯಿತಿಯವರು ಕಾಂಪ್ಯಾಕ್ಟರ್‌ಗಳನ್ನು ತಡೆದಿದ್ದಾರೆ. ಸಮಸ್ಯೆ ಪರಿಹರಿಸಲು, ನಗರದ ತ್ಯಾಜ್ಯ ನಿರ್ವಹಣೆ ಹೊಣೆ ಹೊತ್ತಿರುವ ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳು ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಯಾವುದೇ ಅಂತಿಮ ನಿರ್ಧಾರವಾಗದಿರುವುದರಿಂದ ಗ್ರಾಮ ಪಂಚಾಯಿತಿಯವರು ತ್ಯಾಜ್ಯ ವಿಲೇವಾರಿಗೆ ಅನುವು ಮಾಡಿಕೊಟ್ಟಿಲ್ಲ.

ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಸ್ಥಗಿತ ಹಾಗೂ ಅಲ್ಲಿರುವ ದ್ರವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಕಣ್ಣೂರು ಗ್ರಾಮ ಪಂಚಾಯಿತಿಯವರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಮಧ್ಯೆ ಮಾತುಕತೆ ಮುಂದುವರಿದಿದೆ.

ಬೆಂಗಳೂರಿನ ವಿ.ವಿ. ಪುರದ ಜೈನ್‌ ಕಾಲೇಜು ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ಕಸದ ರಾಶಿ ಪ್ರಜಾವಾಣಿ ಚಿತ್ರ
ಮೆಜೆಸ್ಟಿಕ್ ಬಳಿ ಕಸ ತುಂಬಿದ ಕಾಂಪ್ಯಾಕ್ಟರ್‌ಗಳು ಶುಕ್ರವಾರ ನಿಂತಿದ್ದವು ಪ್ರಜಾವಾಣಿ ಚಿತ್ರ 
ಕಸ ತುಂಬಿದ ಆಟೊ ಟಿಪ್ಪರ್‌ಗಳು ರಸ್ತೆಗಳಲ್ಲೇ ನಿಂತಿವೆ ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.