ADVERTISEMENT

ಕಸ ಸಂಗ್ರಹಕ್ಕೆ 600 ವಾಹನ: ಬಿಬಿಎಂಪಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 20:27 IST
Last Updated 25 ನವೆಂಬರ್ 2020, 20:27 IST
ಎನ್.ಮಂಜುನಾಥ ಪ್ರಸಾದ್
ಎನ್.ಮಂಜುನಾಥ ಪ್ರಸಾದ್   

ಬೆಂಗಳೂರು: ಒಣ ಕಸವನ್ನು ಮನೆ ಮನೆಯಿಂದ ಸಂಗ್ರಹಿಸಲು ಹೊಸದಾಗಿ 600 ವಾಹನಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಹಸಿರು ದಳ, ಬಿಬಿಸಿ ಮೀಡಿಯಾ ಆ್ಯಕ್ಷನ್, ಕೇರ್, ಲೇಬರ್ ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ ಹಾಗೂ ವಿವಿಧ ನಾಗರಿಕ ಸಂಘಟನೆಗಳು ‘ಸಾಮೂಹಿಕ ಶಕ್ತಿ’ ಹೆಸರಿನಲ್ಲಿ ಆಯೋಜಿಸಿದ್ದ ಕಸ ಆಯುವವರ ಸವಾಲುಗಳು ಮತ್ತು ಪರಿಸರ ಸಂರಕ್ಷಣೆಯಲ್ಲಿ ಅವರ ಪಾತ್ರದ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದರು.

‘ಕಸ ಸಂಗ್ರಹ ಮಾಡುವವರ ಮೇಲೆಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿಯಿಂದ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಇದೆ. ಅವರ ಗೌರವಯುತ ಜೀವನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 8 ಸಾವಿರ ಜನರಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ವಾಹನಗಳನ್ನು ಒದಗಿಸಲಾಗಿದೆ’ ಎಂದರು.

ADVERTISEMENT

‘ಇವುಗಳ ಹೊರತಾಗಿಯೂ ಅವರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮತ್ತು ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಲು ಅವರನ್ನು ಜಾಗೃತಗೊಳಿಸಬೇಕಾಗಿದೆ. ಈ ಕೆಲಸಕ್ಕೆ ನಾಗರಿಕ ಸಂಸ್ಥೆಗಳ ಸಹಕಾರ ಅತೀ ಮುಖ್ಯ’ ಎಂದು ಹೇಳಿದರು.

ನಂತರ ನಡೆದ ಸಂವಾದದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ(ಕಸ ನಿರ್ವಹಣೆ) ಡಿ. ರಂದೀಪ್, ಹಸಿರು ದಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ನಳಿನಿ ಶೇಖರ್, ಭಾರತಿ ದೇವನ್ ಪಾಲ್ಗೊಂಡು ಘನತ್ಯಾಜ್ಯ ನಿರ್ವಹಣೆಯಲ್ಲಿ ಚಿಂದಿ ಆಯುವವರ ಪಾತ್ರದ ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.