ADVERTISEMENT

ತ್ಯಾಜ್ಯ ಬಳಕೆದಾರರ ಶುಲ್ಕ: ವಾಪಸ್‌ಗೆ ಆಗ್ರಹ

ದೇಶದಲ್ಲಿ ಬೆಂಗಳೂರಿನಲ್ಲಿ ಮಾತ್ರ ಎರಡು ಬಗೆಯ ತೆರಿಗೆ, ಇದು ಅನಾಗರಿಕ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:26 IST
Last Updated 28 ಮೇ 2025, 16:26 IST
ಮಹೇಶ್ವರ್‌ ರಾವ್‌ ಅವರಿಗೆ ಎಸ್‌. ರಘು, ಸಿ.ಕೆ. ರಾಮಮೂರ್ತಿ, ಮುನಿರಾಜು, ಸಪ್ತಗಿರಿಗೌಡ, ಹರೀಶ್‌ ಮನವಿ ಸಲ್ಲಿಸಿದರು
ಮಹೇಶ್ವರ್‌ ರಾವ್‌ ಅವರಿಗೆ ಎಸ್‌. ರಘು, ಸಿ.ಕೆ. ರಾಮಮೂರ್ತಿ, ಮುನಿರಾಜು, ಸಪ್ತಗಿರಿಗೌಡ, ಹರೀಶ್‌ ಮನವಿ ಸಲ್ಲಿಸಿದರು   

ಬೆಂಗಳೂರು: ಬಿಬಿಎಂಪಿ ವಿಧಿಸಿರುವ ಘನತ್ಯಾಜ್ಯ ನಿರ್ವಹಣೆಗೆ ಬಳಕೆದಾರರ ಶುಲ್ಕವನ್ನು ವಾಪಸ್‌ ಪಡೆಯಬೇಕು ಎಂದು ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಶಾಸಕರು ಒತ್ತಾಯಿಸಿದರು.

ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರಿಗೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ಬಿಜೆಪಿ ಶಾಸಕರಾದ ಎಸ್‌. ರಘು, ಮುನಿರಾಜು, ಸಿ.ಕೆ. ರಾಮಮೂರ್ತಿ, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಗೋಪಾಲಯ್ಯ, ರವಿಸುಬ್ರಮಣ್ಯ ಅವರಿದ್ದ ನಿಯೋಗ ಬುಧವಾರ ಮನವಿ ಸಲ್ಲಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌. ಅಶೋಕ, ‘ಬೆಂಗಳೂರಿನ ಜನರ ಮೇಲೆ ಕಸದ ಸೆಸ್‌ ಜೊತೆಗೆ, ಬಳಕೆದಾರರ ಶುಲ್ಕ ವಿಧಿಸಲಾಗಿದೆ. ಈ ನಿರ್ಧಾರವನ್ನು ಸರ್ಕಾರ ಹಿಂಪಡೆದು ಹಿಂದಿನಂತೆಯೇ ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕು. ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್‌ ಸರ್ಕಾರ ಟನ್‌ಗಟ್ಟಲೆ ತೆರಿಗೆಯ ಭಾರವನ್ನು ಹೇರಿದೆ. ಈಗ ಕಸದಿಂದ ರಸ ತೆಗೆಯುವ ಸ್ಕೀಮ್‌ ಮಾಡಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕಸದ ತೆರಿಗೆಯನ್ನು ಕಾಂಗ್ರೆಸ್‌ ವಿಧಿಸಿದೆ’ ಎಂದರು.

ADVERTISEMENT

‘ಸೆಸ್‌ನಿಂದಲೇ ಸುಮಾರು ₹250 ಕೋಟಿ ಸಂಗ್ರಹವಾಗುತ್ತಿದೆ. ಕಸದ ಟೆಂಡರ್‌ನ ಮೌಲ್ಯವೇ ₹147 ಕೋಟಿ. ಆದರೂ, ಜನರಿಂದ ಅತ್ಯಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಬಳಕೆದಾರರ ಶುಲ್ಕವೂ ಸೇರಿದರೆ ₹500 ಕೋಟಿಯಿಂದ ₹600 ಕೋಟಿ ಸಂಗ್ರಹವಾಗುತ್ತದೆ. ಯಾರ ಮನೆ ಹಾಳು ಮಾಡಲು ಸರ್ಕಾರ ಇಷ್ಟು ಹಣವನ್ನು ಸಂಗ್ರಹಿಸುತ್ತಿದೆ’ ಎಂದು ಪ್ರಶ್ನಿಸಿದರು.

‘ಒಂದೋ ಬಳಕೆದಾರರ ಶುಲ್ಕ, ಇಲ್ಲವಾದರೆ ಸೆಸ್‌ ಸಂಗ್ರಹಿಸಬೇಕು. ಎರಡೂ ಶುಲ್ಕ ವಿಧಿಸುತ್ತಿರುವುದರಿಂದ ಮನೆಗಳ ಬಾಡಿಗೆ ದರ ಹೆಚ್ಚಲಿದೆ. ವಾಣಿಜ್ಯ ಕಟ್ಟಡಗಳ ಬಾಡಿಗೆ, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಲೆ, ಹೋಟೆಲ್‌ಗಳ ದರ ಹೆಚ್ಚಲಿದೆ. ಕೇಂದ್ರ ಸರ್ಕಾರದ ಕಾಯ್ದೆ ಎಂದು ನೆಪ ಹೇಳುತ್ತಾರೆ. ಎರಡು ಬಗೆಯ ಶುಲ್ಕ ವಿಧಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ’ ಎಂದರು.

ಸಭೆ ನಡೆಸಿ: ‘ಬೆಂಗಳೂರಿನ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ಹಿಂದೆ ಚದರ ಅಡಿಗೆ ತಕ್ಕಂತೆ ಕಸದ ಸೆಸ್‌ ವಿಧಿಸಲಾಗುತ್ತಿತ್ತು. ಅದೇ ಮಾದರಿಯನ್ನು ಜಾರಿಗೆ ತರಬೇಕು. ಈಗಾಗಲೇ ಬೆಂಗಳೂರಿನ ಜನರು ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು’ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.