ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣದ ದರದ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು ಜಲ ಮಂಡಳಿಯಲ್ಲಿ ನೀರಿನ ದರ ಪರಿಷ್ಕರಣೆ ಪ್ರಸ್ತಾವದ ಚರ್ಚೆ ಮುನ್ನಲೆಗೆ ಬಂದಿದೆ.
‘ದರ ಪರಿಷ್ಕರಣೆ ವಿಷಯದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇವೆ. ದರ ಪರಿಷ್ಕರಣೆ ಕುರಿತು ನಗರ ಭಾಗ ಜನಪ್ರತಿನಿಧಿಗಳೊಂದಿಗೆ ಈ ತಿಂಗಳಲ್ಲೇ ಸಭೆ ನಡೆಸಲಿದ್ದಾರೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
‘ಸಭೆಯಲ್ಲಿ ವ್ಯಕ್ತವಾಗುವ ಸಲಹೆ, ಅಭಿಪ್ರಾಯಗಳನ್ನು ಪರಿಗಣಿಸಿ, ಉಪ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.
ನಗರದ ಒಂದೂವರೆ ಕೋಟಿ ಜನರಿಗೆ ನೀರು ಪೂರೈಸುವ ಜೊತೆಗೆ, ಒಳ ಚರಂಡಿ ನಿರ್ವಹಣೆ ಮಾಡುತ್ತಿರುವ ಜಲಮಂಡಳಿ ಆದಾಯದ ಕೊರತೆ ಎದುರಿಸುತ್ತಿದ್ದು, ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದೆ. ಹಾಗಾಗಿ ನೀರಿನ ದರ ಪರಿಷ್ಕೃಣೆ ಅನಿವಾರ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
2014ರ ನಂತರ ಅಂದರೆ ಹತ್ತು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ನಗರದ ಜನಸಂಖ್ಯೆ ಹೆಚ್ಚಾಗಿದೆ. ವಿದ್ಯುತ್ ವೆಚ್ಚ(2014–2024ರ ಮಾರ್ಚ್)ಶೇ 107.3ರಷ್ಟು ಹೆಚ್ಚಾಗಿದೆ, ನಿರ್ವಹಣಾ ವೆಚ್ಚ ಶೇ 122.5, ಶೇ 61.3ರಷ್ಟು ಸಿಬ್ಬಂದಿ ವೇತನ ಮತ್ತು ಪಿಂಚಣಿ ಸೇರಿ ಜಲಮಂಡಳಿಯ ಪ್ರತಿ ತಿಂಗಳ ವೆಚ್ಚ ₹170 ಕೋಟಿಯಾಗುತ್ತಿದೆ. ಆದಾಯ ₹129 ಕೋಟಿ ಸಂಗ್ರಹವಾಗುತ್ತಿದೆ. ಆದಾಯಕ್ಕಿಂತ ವೆಚ್ಚ ಹೆಚ್ಚಾಗುತ್ತಿ ರುವ ಕಾರಣ, ‘ನಗರದ ನಾಗರಿಕರಿಗೆ ಸಮರ್ಪಕ ಸೌಲಭ್ಯ ನೀಡುವುದಕ್ಕಾಗಿ ನೀರಿನ ದರ ಪರಿಷ್ಕರಣೆ ಅನಿವಾರ್ಯ’ವಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ದರ ಪರಿಷ್ಕರಣೆ ಪ್ರಸ್ತಾವಕ್ಕೆ ಸಲಹೆ ಹಾಗೂ ಬೆಂಬಲ ನೀಡುವಂತೆ ಕೋರಿ ಡಿಸೆಂಬರ್ 2ರಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಅವರು ಬೆಂಗಳೂರು ನಗರದ ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದರು. ‘ಸ್ವಾಯತ್ತವಾಗಿರುವ ಜಲಮಂಡಳಿಗೆ ನೀರಿನ ಶುಲ್ಕವೇ ಪ್ರಮುಖ ಆದಾಯವಾಗಿದೆ. ಹೀಗಾಗಿ ‘ಜಲಮಂಡಳಿ ಉಳಿವಿಗೆ ದರ ಪರಿಷ್ಕರಣೆ’ ಅನಿವಾರ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.