ಬೆಂಗಳೂರು: ನೀರಿನ ಅತಿಯಾದ ಬಳಕೆಯ ಮೇಲೆ ಮಿತಿ ಹೇರಲೆಂದೇ ನಗರದಲ್ಲಿ ಮೊದಲ ಬಾರಿಗೆ ಪರಿಚಯಿಸಿರುವ ಏರೇಟರ್‌ಗಳ ಅಳವಡಿಕೆಯಿಂದ ಬೆಂಗಳೂರು ಜಲಮಂಡಳಿಗೆ ನಿತ್ಯ 90 ಎಂಎಲ್‌ಡಿ ನೀರು ಉಳಿತಾಯವಾಗುತ್ತಿದೆ.
15 ತಿಂಗಳ ಅವಧಿಯಲ್ಲಿ 14,33,316 ಏರೇಟರ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ನೀರಿನ ಬಳಕೆಯನ್ನು ಮಿತಿಗೊಳಿಸಿ, ವ್ಯರ್ಥವಾಗುವುದನ್ನು ತಪ್ಪಿಸಿದ್ದರಿಂದ ನಗರದಲ್ಲಿ ನೀರಿನ ಬೇಡಿಕೆ ಶೇಕಡ 30ರಷ್ಟು ತಗ್ಗಿದೆ. ಅಲ್ಲದೆ ಹೆಚ್ಚಿನ ಗ್ರಾಹಕರಿಗೆ ನೀರು ಲಭ್ಯವಾಗುತ್ತಿದ್ದು ದೂರುಗಳು ಕಡಿಮೆಯಾಗಿವೆ.
ಸದ್ಯ ಅಪಾರ್ಟ್‌ಮೆಂಟ್, ಸರ್ಕಾರಿ ಕಚೇರಿಗಳು, ಹೋಟೆಲ್, ಮಾಲ್‌ಗಳ ನಲ್ಲಿಗಳಿಗೆ ಬಳಕೆಯಾಗುತ್ತಿರುವ ಏರಿಯೇಟರ್‌ಗಳನ್ನು ಪ್ರತಿ ಮನೆಗೂ ಅಳವಡಿಸಬೇಕು ಎನ್ನುವುದು ಜಲಮಂಡಳಿಯ ಉದ್ದೇಶ. ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದ್ದು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತದೆ.
‘ನೀರಿನ ಸಂರಕ್ಷಣೆಯ ಭಾಗವಾಗಿ ಏರೇಟರ್‌ಗಳನ್ನು ಅಳವಡಿಸಿದ್ದೇವೆ. ನಮ್ಮ ನಿರೀಕ್ಷೆಯಂತೆ ನೀರಿನ ಬಳಕೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದು ಕಂಡು ಬಂದಿದೆ. ಇದು ಜಲ ಸಂರಕ್ಷಣೆ ಹಾಗೂ ಪರಿಸರದ ಮೇಲೆ ಬೀರುವ ಪರಿಣಾಮವನ್ನು ತಪ್ಪಿಸುವ ಕ್ರಮವೂ ಹೌದು’ ಎನ್ನುತ್ತಾರೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್.
ನಗರದಲ್ಲಿನ ಅಪಾರ್ಟ್‌ಮೆಂಟ್‌ಗಳು, ರೆಸ್ಟೋರೆಂಟ್, ಸ್ಟಾರ್ ಹೊಟೇಲ್‌ಗಳು, ಮಾಲ್‌ಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳು, ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಅಲ್ಲಿ ಬಳಸುವ ನಲ್ಲಿಗಳಿಗೆ ಏರಿಯೇಟರ್‌ಗಳ ಅಳವಡಿಕೆ ಮಾಡಲಾಯಿತು. ಆರಂಭದಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರ ಇದ್ದ ಏರೇಟರ್‌ಗಳ ಬಳಕೆಯನ್ನು, ಕ್ರಮೇಣ ಎಲ್ಲ ಕಡೆ ಕಡ್ಡಾಯವಾಗಿ ಬಳಸುವಂತೆ ತಾಕೀತು ಮಾಡಲಾಗಿದೆ.
‘2024ರ ಮಾರ್ಚ್ ಕೊನೆಯ ವಾರದೊಳಗೆ ಏರೇಟರ್ ಅಳವಡಿಸಿಕೊಳ್ಳದೇ ಇದ್ದವರಿಗೆ ₹5,000 ದಂಡ ವಿಧಿಸುವ ಜತೆಗೆ ಶೇ 50ರಷ್ಟು ನೀರು ಸರಬರಾಜು ಕಡಿಮೆ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು. ಆರಂಭದಲ್ಲಿ ಈ ಯೋಜನೆಗೆ ಅಷ್ಟಾಗಿ ಪ್ರತಿಕ್ರಿಯೆ ಸಿಗಲಿಲ್ಲ. ಜಲಮಂಡಳಿಯು ನಿರಂತರವಾಗಿ ಜಾಗೃತಿ ಮೂಡಿಸಿ, ದಂಡ ಪ್ರಯೋಗದ ಎಚ್ಚರಿಕೆ ನೀಡಿದ್ದರಿಂದ ಏರಿಯೇಟರ್ ಬಳಸುವವರ ಪ್ರಮಾಣ ಹೆಚ್ಚಾಯಿತು. ಮುಂದಿನ ಬೇಸಿಗೆ ವೇಳೆಗೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
‘ಇದುವರೆಗೆ ಏರೇಟರ್ ಅಳವಡಿಕೆ ಮಾಡಿಕೊಳ್ಳದವರ ಸಂಖ್ಯೆ ಬಹಳಷ್ಟಿದೆ. ಅಂತಹವರಿಗೆ ಬಿಲ್‌ನೊಂದಿಗೆ ಸೂಚನೆ ನೀಡಲಾಗುತ್ತಿದೆ. ಹೊಸದಾಗಿ ಜಲಮಂಡಳಿಯ ನೀರಿನ ಸಂಪರ್ಕ ಪಡೆಯಲು ಬಂದವರಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸುವಂತೆ ನಿರ್ದೇಶನ ನೀಡಲಾಗುತ್ತಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಿ.ಎಸ್. ದಲಾಯತ್ ಹೇಳಿದರು.
ಜಲಮಂಡಳಿ ಕಾಯ್ದೆ 1964ರ ಸೆಕ್ಷನ್ 109ರ ಅಡಿಯಲ್ಲಿ ನೀರಿನ ಬಳಕೆ ಮಿತಗೊಳಿಸಲೆಂದೇ ಏರಿಯೇಟರ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಜನರು ಅನಗತ್ಯವಾಗಿ ನೀರು ವ್ಯಯ ಮಾಡುವುದನ್ನು ತಪ್ಪಿಸಬೇಕು. ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎನ್ನುವುದು ಜಲಮಂಡಳಿಯ ಆಶಯವಾಗಿದೆ.
ಉಳಿತಾಯ ಹೇಗೆ?
ಒಂದು ನಲ್ಲಿಗೆ ಏರೇಟರ್ ಅಳವಡಿಸಿದರೆ ಒಂದು ನಿಮಿಷಕ್ಕೆ ಮೂರು ಲೀಟರ್‌ವರೆಗೂ ನೀರು ಪಡೆಯಬಹುದು. ಏರಿಯೇಟರ್ ಅಳವಡಿಸದೇ ಇದ್ದರೆ ಹತ್ತು ಲೀಟರ್ ನೀರನ್ನು ಪಡೆಯಬಹುದಿತ್ತು. ಈ ಕ್ರಮದಿಂದ ಬಳಸುವ ಪ್ರಮಾಣದಲ್ಲಿ ಶೇ 30ರಷ್ಟು ಉಳಿತಾಯವಾಗಿದೆ ಎನ್ನುವುದು ಜಲಮಂಡಳಿ ವಿವರಣೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಏರೇಟರ್ ಅಳವಡಿಸಿದ್ದರಿಂದ ನೀರಿನ ಬಳಕೆ ಪ್ರಮಾಣ ತಗ್ಗಿದೆ. ನಿರಂತರ ಪ್ರಯತ್ನ ಫಲಪ್ರದವಾಗಿದೆ.- ರಾಮ್‌ಪ್ರಸಾತ್ ಮನೋಹರ್ ಅಧ್ಯಕ್ಷರು ಜಲಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.