ADVERTISEMENT

Bengaluru Rains: ಕೆಳಸೇತುವೆಯಲ್ಲಿ ನೀರು ಭರ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 15:29 IST
Last Updated 19 ಸೆಪ್ಟೆಂಬರ್ 2023, 15:29 IST
ಶಿವಾನಂದವೃತ್ತದ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಆವರಿಸಿದ್ದ ಮಳೆ ನೀರು.
ಶಿವಾನಂದವೃತ್ತದ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಆವರಿಸಿದ್ದ ಮಳೆ ನೀರು.   

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಹಾಗೂ ತಡರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಜಂಕ್ಷನ್‌ ಹಾಗೂ ಕೆಳಸೇತುವೆಗಳಲ್ಲಿ ನೀರು ಭರ್ತಿಯಾಗಿ ವಾಹನ ಸವಾರರು ಪರದಾಡಿದರು.

ಗಣೇಶ ಹಬ್ಬದ ಸಂಭ್ರಮಕ್ಕೆ ಮಳೆ ತುಸು ಅಡಚಣೆ ಉಂಟು ಮಾಡಿತ್ತು. ಮಳೆ ಹಾಗೂ ಗಾಳಿಗೆ ಅಲ್ಲಲ್ಲಿ ಬೃಹತ್‌ ಮರಗಳು ಉರುಳಿದ್ದವು.

‘ನಗರದಲ್ಲಿ ಬುಧವಾರದಿಂದ ನಾಲ್ಕು ದಿನ ಸಂಜೆ ಅಥವಾ ರಾತ್ರಿ ವೇಳೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ADVERTISEMENT

ಮೆಜೆಸ್ಟಿಕ್‌, ಚಾಮರಾಜಪೇಟೆ, ಸಂಪಂಗಿರಾಮನಗರ, ರಾಜಮಹಲ್‌ ಗುಟ್ಟಹಳ್ಳಿ, ಮಾರತ್‌ಹಳ್ಳಿ, ಎಚ್‌.ಗೊಲ್ಲಹಳ್ಳಿ, ಸಾರಕ್ಕಿ, ಪುಲಕೇಶಿನಗರ, ಹೆಮ್ಮಿಗೆಪುರ, ಕೋರಮಂಗಲ, ಬಿಟಿಎಂ ಲೇಔಟ್‌, ಬೆಳ್ಳಂದೂರು, ಎಚ್‌ಎಸ್‌ಆರ್‌ ಲೇಔಟ್‌, ಬೇಗೂರು, ಅರಕೆರೆ, ಹೊಯ್ಸಳ ನಗರ, ದೊಮ್ಮಲೂರು, ಲಕ್ಕಸಂದ್ರದಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದೆ.

ಎಚ್‌ಎಎಲ್‌ ವಿಮಾನ ನಿಲ್ದಾಣದ ಬಳಿಯ ಕೆಳಸೇತುವೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ತೇಲಿದ ಕಾರು.

ಎಚ್‌ಎಎಲ್‌ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ನಿಲ್ದಾಣದ ಸಮೀಪದ ಕೆಳಸೇತುವೆಯಲ್ಲಿ ಅಪಾರ ಪ್ರಮಾಣ ನೀರು ಸಂಗ್ರಹಗೊಂಡು ಕಾರೊಂದು ನೀರಿನಲ್ಲಿ ಮುಳುಗಿತ್ತು. ಬಿಇಎಲ್‌ ವೃತ್ತದಿಂದ ಎನ್‌ಜಿಇಎಫ್‌ ಸಿಗ್ನಲ್‌ ಕಡೆಗೆ ತೆರಳುವ ಮಾರ್ಗದಲ್ಲಿ ಬೃಹತ್‌ ಮರ ಉರುಳಿ ವಾಹನ ಸಂಚಾರ ಬಂದ್ ಆಗಿತ್ತು.

ಹಲಸೂರು ಸಂಚಾರ ಪೊಲೀಸ್ ಠಾಣ ವ್ಯಾಪ್ತಿಯ ಗಂಗಾಧರ್ ಚೆಟ್ಟಿ ರಸ್ತೆಯ ತಿರುವಳ್ಳುವರ್ ಜಂಕ್ಷನ್ ಮಳೆ ನೀರಿನಿಂದ ಆವರಿಸಿತ್ತು. ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ತೆರಳಿದರು. ವಿಲ್ಲರ್ ರಸ್ತೆಯ ಸಿಂಧಿ ಕಾಲೊನಿ ಜಂಕ್ಷನ್‌ ಜಲಾವೃತಗೊಂಡಿತ್ತು. ಬನ್ನೇರುಘಟ್ಟ ರಸ್ತೆಯ ನಾಗಾರ್ಜುನ್‌ ಹೋಟೆಲ್‌ ಬಳಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಸಮಸ್ಯೆ ಉಂಟಾಗಿತ್ತು.

ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಹೊಳೆಯಂತಾಗಿದ್ದ ರಸ್ತೆ.

ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ ಜಲಾವೃತಗೊಂಡಿತ್ತು. ನೆಹರೂ ವೃತ್ತದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.