ADVERTISEMENT

ಬೆಂಗಳೂರು ನಮ್ಮ ಹೆಮ್ಮೆ: 125 ವರ್ಷಕ್ಕೂ ಮೊದಲೇ ನಗರಕ್ಕೆ ನೀರಿನ ಕೊಳವೆ...!

ಎಸ್.ರವಿಪ್ರಕಾಶ್
Published 4 ಡಿಸೆಂಬರ್ 2021, 19:36 IST
Last Updated 4 ಡಿಸೆಂಬರ್ 2021, 19:36 IST
ನಗರಕ್ಕೆ ನೀರು ಪೂರೈಸುವ ಕೊಳವೆ ಮಾರ್ಗ
ನಗರಕ್ಕೆ ನೀರು ಪೂರೈಸುವ ಕೊಳವೆ ಮಾರ್ಗ   

ಬೆಂಗಳೂರು: ನಗರಕ್ಕೆ ಮೊದಲ ಬಾರಿಗೆ ನೀರಿನ ದೊಡ್ಡ ದೊಡ್ಡ ಪೈಪ್‌ಗಳನ್ನು ಹಾಕಿ ಪೈಪ್‌ಲೈನ್‌ ಅಳವಡಿಸಿ ನೀರು ಪೂರೈಕೆ ಮಾಡಿದ್ದು ಯಾವಾಗ?

ಈ ಪ್ರಶ್ನೆ ಕೆದಕಿಕೊಂಡು ಹೋದಾಗ ಅತ್ಯಂತ ಕುತೂಹಲದ ಕಥೆ ಅನಾವರಣಗೊಳ್ಳುತ್ತದೆ. ಅಂದು ನಗರಕ್ಕೆ ಕೆರೆ, ಜಲಾಶಯ ಮತ್ತು ತೆರೆದ ಬಾವಿಗಳ ನೀರೇ ಕುಡಿಯಲು ಮತ್ತು ಇತರ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು. ಇಲ್ಲಿನ ಭೌಗೋಳಿಕ ವಾತಾವರಣವೂ ನೈಸರ್ಗಿಕವಾಗಿ ನೀರನ್ನು ಹರಿಸಲು ಪೂರಕವಾಗಿಯೇ ಇತ್ತು. ನೀರು ಪೂರೈಕೆಗೆ ಕೆರೆ, ನಾಲೆಗಳ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡದಾಗಿ ಬೆಳೆಯುತ್ತಿದ್ದ ‘ನಗರ’ಕ್ಕೆ ಹೊಸ ವ್ಯವಸ್ಥೆ ಅಗತ್ಯವಿತ್ತು.

ಬೆಂಗಳೂರು ತನ್ನ ಒಡಲಿನಲ್ಲಿ ನೂರಾರು ಕೆರೆಗಳನ್ನು ಇಟ್ಟುಕೊಂಡಿದ್ದರೂ ಮಳೆ ವೈಫಲ್ಯದಿಂದ ನೂರು ವರ್ಷಗಳ ಹಿಂದೆಯೂ ಕೆರೆಗಳು ಒಣಗುವುದು ಸಾಮಾನ್ಯವಾಗಿತ್ತು. 1870 ರ ವೇಳೆಯಲ್ಲಿ ಬೆಂಗಳೂರಿನ ದಂಡು ಪ್ರದೇಶ ಮತ್ತಿತರ ನಾಗರಿಕ ಪ್ರದೇಶಗಳ ನೀರಿನ ಬೇಡಿಕೆ ಈಡೇರಿಸಲು ಹಲಸೂರು, ಶೂಲೆ, ಪುದುಪಚೇರಿ, ಸಂಪಂಗಿ, ಧರ್ಮಾಂಬುಧಿ ಕರೆಗಳು ಪ್ರಮುಖ ಆಕರಗಳಾಗಿದ್ದವು. ದೇವಸ್ಥಾನಗಳ ಕಲ್ಯಾಣಿಗಳು ಮತ್ತು ತೆರೆದ ಬಾವಿಗಳ ನೀರನ್ನೂ ಬಳಸಲಾಗುತ್ತಿತ್ತು. ಆದರೂ ಸಾಲುತ್ತಿರಲಿಲ್ಲ. 1873ರಲ್ಲಿ ಮಿಲ್ಲರ್ಸ್‌ ಕೆರೆಯೂ ಸೇರಿದಂತೆ ಅನೇಕ ಕೆರೆಗಳನ್ನು ನಿರ್ಮಿಸಲಾಯಿತು.

ADVERTISEMENT

1875 ರಿಂದ 1877 ರವರೆಗೆ ಎರಡೂವರೆ ವರ್ಷ ಮಳೆ ಇಲ್ಲದೇ ಬೆಂಗಳೂರಿನ ಎಲ್ಲ ಕೆರೆಗಳ ಬತ್ತಿ, ಜನ ಕಂಗೆಟ್ಟರು. ಕೆರೆಗಳಿಂದ ಸೊಳ್ಳೆಗಳೂ ಹೆಚ್ಚಾಗುತ್ತಿವೆ ಎಂಬ ಕಾರಣಕ್ಕೆ 1880ರ ದಶಕದಲ್ಲಿ ಕೆಲವು ಕೆರೆಗಳನ್ನೂ ಮುಚ್ಚಲಾಯಿತು.

ಆಗ ಮೈಸೂರಿನ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ಅವರು ಬೆಂಗಳೂರಿಗೆ ಕೊಳವೆಯಲ್ಲಿ ನೀರಿನ ಪೂರೈಕೆಯ ಅಗತ್ಯವನ್ನು ಮನಗಂಡರು.

ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರಿಂದ ಇದಕ್ಕೆ ಒಪ್ಪಿಗೆ ಸಿಕ್ಕಿತು. ಯೋಜನೆ ಆರಂಭಿಸುವ ಮೊದಲೇ ಮಹಾರಾಜರು ನಿಧನರಾದರು. ಮಹಾರಾಣಿಯವರ ಮುಂದಾಳತ್ವದಲ್ಲಿ ಶೇಷಾದ್ರಿ ಅಯ್ಯರ್‌ ಯೋಜನೆಗೆ ಚಾಲನೆ ನೀಡಿದರು.ಹೆಸರಘಟ್ಟ ಕೆರೆಯ ಬಳಿಯಿಂದ ಅರ್ಕಾವತಿ ನೀರನ್ನು ನಗರದ ಹೃದಯ ಭಾಗಕ್ಕೆ ಪೂರೈಸುವ ಮಹತ್ವದ ಯೋಜನೆ ಇದಾಗಿತ್ತು.

1894ರಲ್ಲಿ ಮೊದಲ ಬಾರಿಗೆ ನೀರು ಪೂರೈಕೆಗಾಗಿ ಕಬ್ಬಿಣದ ಕೊಳವೆಗಳನ್ನು ಅಳವಡಿಸಲಾಯಿತು. ಪ್ರತಿಯೊಬ್ಬರಿಗೆ ದಿನಕ್ಕೆ ತಲಾ 55 ಲೀಟರ್‌ ನೀರು ಪೂರೈಸುವ ಈ ಯೋಜನೆಗೆ ಚಾಮರಾಜೇಂದ್ರ ವಾಟರ್‌ ವರ್ಕ್‌ (ಸಿಡಬ್ಲ್ಯುಡಬ್ಲ್ಯು) ಎಂದು ಹೆಸರಿಡಲಾಗಿತ್ತು.

ನಗರದಲ್ಲಿ ಆಗ 2.50 ಲಕ್ಷ ಜನಸಂಖ್ಯೆ ಇತ್ತು. ಅರ್ಕಾವತಿ ನದಿಯಿಂದ ಬೆಂಗಳೂರಿನ ಹೃದಯ ಭಾಗಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಹೆಸರಘಟ್ಟದಿಂದ ಸೋಲದೇವನಹಳ್ಳಿ, ಜಾಲಹಳ್ಳಿ ಕ್ರಾಸ್‌, ಚಿಕ್ಕಬಾಣಾವರ, ಯಶವಂತಪುರ, ಮಲ್ಲೇಶ್ವರ, ದತ್ತಾತ್ರೇಯ ದೇವಸ್ಥಾನ, ಶೇಷಾದ್ರಿಪುರ, ಲೋವರ್‌ ಪ್ಯಾಲೇಸ್‌ ಅರ್ಚರ್ಡ್‌, ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕೃಷ್ಣಾ, ಬಾಲಬ್ರೂಯಿ ಸಮಿಪದ ಜಲಮಂಡಳಿ ಮತ್ತು ರೇಸ್‌ಕೋರ್ಸ್‌ ಬಳಿ ಇರುವ ಕೆಳಮಟ್ಟದ ಜಲಾಶಯಕ್ಕೆ ತಲುಪಿಸಲು ಪೈಪ್‌ಗಳನ್ನು ಜೋಡಿಸಲಾಯಿತು. 1896 ರಲ್ಲಿ ಸ್ಥಾಪಿಸಿದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ ಹಾಗೂ ಹೆಸರಘಟ್ಟದಿಂದ ರೇಸ್‌ಕೋರ್ಸ್‌ವರೆಗಿನ ಪೈಪ್‌ಲೈನ್‌ಗಳು ಈಗಲೂ ಇದೆ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸಿರುವ ಎಚ್‌.ಎಸ್. ಸುಧೀರ.

1925–26 ರಲ್ಲಿ ಮತ್ತೆ ಮುಂಗಾರು ಮಳೆ ವೈಫಲ್ಯವಾಗಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಯಿತು. ಹೊಸ ನೀರಿನ ಮೂಲ ಕಂಡುಕೊಳ್ಳಲು ಮೈಸೂರು ಅರಸರು ತೀರ್ಮಾನಿಸಿ, ಎಂ. ವಿಶ್ವೇಶ್ವರಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ತಿಪ್ಪಗೊಂಡನಹಳ್ಳಿಯಲ್ಲಿ ಅರ್ಕಾವತಿಗೆ ಅಣೆಕಟ್ಟೆ ಕಟ್ಟಲು ಸಲಹೆ ನೀಡಿದರು.
ಕಾವೇರಿ ಮತ್ತು ಹೇಮಾವತಿ ನೀರು ತರಲು ಪ್ರಸ್ತಾವವನ್ನೂ ಮುಂದಿಟ್ಟರು. 1929ರ ವೇಳೆಗೆ ವಿಶ್ವೇಶ್ವರಯ್ಯ ಸಲಹೆ ಮೇರೆಗೆ ತಿಪ್ಪಗೊಂಡನಹಳ್ಳಿಯಲ್ಲಿ ಚಾಮರಾಜಸಾಗರ ಅಣೆಕಟ್ಟೆ ನಿರ್ಮಿಸಲಾಯಿತು.

1960ರಲ್ಲಿ ಜಲಮಂಡಳಿಯನ್ನು ಸ್ಥಾಪಿಸಲಾಯಿತು. 1974ರಲ್ಲಿ ನಗರಕ್ಕೆ ಕಾವೇರಿ ನೀರು ಪೂರೈಕೆ ಆರಂಭವಾಯಿತು. ಬೆಳೆಯುತ್ತಲೇ ಇರುವ ನಗರದ ಜನಸಂಖ್ಯೆ ಕೋಟಿ ದಾಟಿದೆ.

126 ವರ್ಷಗಳಷ್ಟು ಹಿಂದೆಯೇ ನಗರಕ್ಕೆ ಕೊಳವೆ ಮೂಲಕ ನೀರು ಪೂರೈಕೆ ಆರಂಭವಾಗಿದ್ದರೂ, ಇಲ್ಲಿನ ನಿವಾಸಿಗಳ ನೀರಿನ ಬೇಡಿಕೆಯನ್ನು ಈಡೇರಿಸುವುದು ಈಗಲೂ ದೊಡ್ಡ ಸಮಸ್ಯೆಯಾಗಿಯೇ ಮುಂದುವರಿದಿದೆ.

* ಇಂತಹ ಜನಪರ ಯೋಜನೆಗಳಿಗೆ ಸಂಪನ್ಮೂಲದ ಕೊರತೆ ಇತ್ತು. ಆದರೂ ಮರ, ತೋಟ ಇತ್ಯಾದಿಗಳನ್ನು ಮಾರಿ ಮೈಸೂರು ಮಹಾರಾಜರು ಜನರಿಗಾಗಿ ಈ ಯೋಜನೆ ಪೂರ್ಣಗೊಳಿಸಿದರು.

-ಎಚ್‌.ಎಸ್.ಸುಧೀರ, ಸಂಶೋಧಕ, ಗುಬ್ಬಿಲ್ಯಾಬ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.