ADVERTISEMENT

ಬೇಸಿಗೆಗೆ ಮುನ್ನವೇ ನೀರಿಗೆ ಪರದಾಟ; ಬತ್ತಿದ ಕೊಳವೆ ಬಾವಿಗಳು

ನಗರದ ಹೊರವಲಯದಲ್ಲಿ ವಾರಕ್ಕೊಮ್ಮೆ ನೀರು

ಗುರು ಪಿ.ಎಸ್‌
Published 25 ಫೆಬ್ರುವರಿ 2020, 20:16 IST
Last Updated 25 ಫೆಬ್ರುವರಿ 2020, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೇಸಿಗೆ ಸಮೀಪಿಸುತ್ತಿದ್ದಂತೆ ನಗರದ ಹೊರವಲಯಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕಾವೇರಿ ನೀರು ಪೂರೈಕೆ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಂತೂ ಜನರ ಪರದಾಟ ತೀವ್ರವಾಗಿದೆ.

ಸಂಪರ್ಕ ಇರುವ ಕೆಲವು ಪ್ರದೇಶಗಳಲ್ಲಿಯೂ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಪೂರೈಸಲಾಗುತ್ತಿದೆ. ಬಹುತೇಕ ಕಡೆ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ.

‘ರಾಮಮೂರ್ತಿ ನಗರದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ವಾರಕ್ಕೆ ಎರಡು ಬಾರಿ ಕಾವೇರಿ ನೀರು ಪೂರೈಸುತ್ತಾರೆ. ಆದರೆ, ಇದು ಯಾವುದಕ್ಕೂ ಸಾಲುವುದಿಲ್ಲ. ಜಲಮಂಡಳಿಯ ಸ್ಥಳೀಯ ಎಂಜಿನಿಯರ್‌ಗಳಿಗೆ ಕೇಳಿದರೆ, ಇಡೀ ರಾಮಮೂರ್ತಿನಗರಕ್ಕೆ ದಿನಕ್ಕೆ 300 ಲಕ್ಷ ಲೀಟರ್‌ ಮಾತ್ರ ನೀಡಲಾಗುತ್ತಿದೆ. ಅದರಲ್ಲಿಯೇ ಎಲ್ಲರಿಗೂ ನೀರು ಕೊಡಬೇಕು. ಹೆಚ್ಚು ನೀರು ಬೇಕೆಂದರೆ ಕಾವೇರಿ ಭವನಕ್ಕೇ ಹೋಗಿ ಕೇಳಿ ಎಂದು ಉತ್ತರಿಸು
ತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಮಮೂರ್ತಿ ನಗರ ನಿವಾಸಿ ಶಿವಾಜಿ ರಾವ್.

ADVERTISEMENT

‘ಜಲಮಂಡಳಿಯವರಿಗೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ’ ಎಂದು ಅವರು ದೂರುತ್ತಾರೆ.

ನೀರು ಖರೀದಿ:ಆನೇಕಲ್‌ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ವಾರ್ಡ್‌ನಲ್ಲಿಯೂ ನೀರಿನ ಕೊರತೆ ನಿವಾಸಿಗಳನ್ನು ಬಾಧಿಸುತ್ತಿದೆ. ಕೂಡ್ಲು, ಪರಪ್ಪನ ಅಗ್ರಹಾರ, ನಾರಾಯಣ ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ವಾರ್ಡ್‌ನಲ್ಲಿಯೇ ತಳಮಟ್ಟದ ಜಲಾಗರ ಇದ್ದರೂ, ಇಲ್ಲಿನವರಿಗೇ ಸರಿಯಾಗಿ ನೀರು ಸಿಗುತ್ತಿಲ್ಲ.

‘ನಾರಾಯಣಪುರಕ್ಕೆ ವಾರಕ್ಕೆ ಒಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ. ಕೂಡ್ಲು ಪ್ರದೇಶದಲ್ಲಿ ಸಮಸ್ಯೆ ಬಿಗಡಾಯಿಸಿದೆ. ಜಲಮಂಡಳಿಗೆ ₹5 ಲಕ್ಷ ಪಾವತಿಸಿ, ಟ್ರಾಕ್ಟರ್‌ನಲ್ಲಿ 10 ಲೋಡ್‌ ನೀರು ತರಿಸಿಕೊಳ್ಳಲಾಗುತ್ತಿದೆ’ ಎಂದು ಪಾಲಿಕೆ ಸದಸ್ಯರಾದ ಶಾಂತಾ ಬಾಬು ಹೇಳುತ್ತಾರೆ.

ಪೈಪ್‌ಲೈನ್‌ ಇದ್ದರೂ, ಸಂಪರ್ಕವಿಲ್ಲ: ಮಹದೇವಪುರ ವಿಧಾನಸಭಾ ಕ್ಷೇತ್ರದ ಬಹುತೇಕ ಕಡೆ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ವಸತಿ ಸಮುಚ್ಚಯಗಳ ನಿವಾಸಿಗಳು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಕಾವೇರಿ ನೀರಿನ ಪೈಪ್‌ಲೈನ್‌ ಹಾಕಲಾಗಿದೆ. ಆದರೆ, ಸಂಪರ್ಕ ಕೊಟ್ಟಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಹಾಗೂ ಸುತ್ತ–ಮುತ್ತಲಿನ ವಾರ್ಡ್‌ಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಈ ವಾರ್ಡ್‌ಗಳ ಶೇ 80ರಷ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಪ್ರದೇಶದಲ್ಲಿ ಯಾವುದೇ ತಳಮಟ್ಟದ ಜಲಾಗರ ಇರದಿರುವುದೂ ಸಮಸ್ಯೆಯಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕಾಮಗಾರಿಯು ಈ ವಾರ್ಡ್‌ಗಳಲ್ಲಿ ನಡೆಯುತ್ತಿದೆ. ಅದೂ ಆಮೆಗತಿಯಲ್ಲಿ ಸಾಗಿರುವುದರಿಂದ, ಎರಡು–ಮೂರು ವರ್ಷ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಆತಂಕವಿದೆ ಎನ್ನುತ್ತಾರೆ ವಿದ್ಯಾರಣ್ಯಪುರ ನಿವಾಸಿ ಶಾಂತಕುಮಾರ್.

ಬತ್ತುತ್ತಿರುವ ಕೊಳವೆ ಬಾವಿಗಳು

‘ನನ್ನ ಅವಧಿಯಲ್ಲಿ 73 ಕೊಳವೆಬಾವಿಗಳನ್ನು ಕೊರೆಸಿದ್ದೇನೆ. ಮೊದಲು ಚೆನ್ನಾಗಿ ನೀರು ಬರುತ್ತಿತ್ತು. ಈಗ 1,400 ಅಡಿ ಅಥವಾ 1,500 ಅಡಿ ಕೊರೆಸಿದರೂ ನೀರು ಬರುತ್ತಿಲ್ಲ. ಬಂದರೂ, ಆರು ತಿಂಗಳಲ್ಲಿ ಬತ್ತಿ ಹೋಗುತ್ತದೆ’ ಎನ್ನುತ್ತಾರೆ ವರ್ತೂರು ವಾರ್ಡ್‌ನ ಪಾಲಿಕೆ ಸದಸ್ಯೆ ಪುಷ್ಪಾ ಮಂಜುನಾಥ್.

‘ನಾಲ್ಕು ತಿಂಗಳಲ್ಲಿ 80 ಕೊಳವೆ ಬಾವಿ ಕೊರೆಸಿದ್ದೇನೆ. ಭೂಮಿಯಲ್ಲಿಯೇ ನೀರಿಲ್ಲ. ಏನು ಮಾಡಬೇಕೋ ತಿಳಿಯುತ್ತಿಲ್ಲ’ ಎನ್ನುತ್ತಾರೆ ಜಕ್ಕೂರು ವಾರ್ಡ್‌ ಸದಸ್ಯ ಕೆ.ಎ. ಮುನೀಂದ್ರಕುಮಾರ್.

‘ಬೇಸಿಗೆಯಲ್ಲಿ ಕೊರತೆ ಆಗುವುದಿಲ್ಲ’

‘ಕಾವೇರಿ ಜಲಾಶಯದಿಂದ ದಿನಕ್ಕೆ 145 ಕೋಟಿ ಲೀಟರ್‌ ನೀರು ಪಂಪ್‌ ಮಾಡುತ್ತಿದ್ದೇವೆ. ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ’ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್.

‘110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ನಗರದ ಹೊರವಲಯದ ಕೆಲವು ಕಡೆ ಸಮಸ್ಯೆ ಆಗಿರಬಹುದು’ ಎಂದು ಅವರು ಹೇಳಿದರು.

‘ನಗರದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಜನರು ಕೂಡ ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.