ADVERTISEMENT

ಡಿ.ಕೆ. ಸುರೇಶ್‌ ಸೋಲಿನ ದುಃಖದಿಂದ ಹೊರಬಂದಿಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 23:52 IST
Last Updated 7 ಜೂನ್ 2024, 23:52 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ತಮ್ಮ ಡಿ.ಕೆ. ಸುರೇಶ್‌ ಸೋಲಿನ ದುಃಖದಿಂದ ನಾವು ಇನ್ನೂ ಹೊರಬಂದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸುರೇಶ್‌ ಸ್ಪರ್ಧೆ ಸಾಧ್ಯತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನಾವು ಆಲೋಚನೆಯನ್ನೇ ಮಾಡಿಲ್ಲ. ನಿದ್ರಾವಸ್ಥೆಯಲ್ಲೇ ಇದ್ದೇನೆ’ ಎಂದರು.

ADVERTISEMENT

‘ಸದ್ಯಕ್ಕೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನರು ನಮಗೆ ಕೊಟ್ಟಿರುವ ಮುನ್ನಡೆಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸುರೇಶ್‌ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ. ಅಲ್ಲಿ ಅನೇಕ ಕಾರ್ಯಕರ್ತರಿದ್ದಾರೆ. ಮುಂದೆ ನೋಡೋಣ’ ಎಂದು ಹೇಳಿದರು.

‘ಸುರೇಶ್‌ ಸೋಲನ್ನು ನನ್ನ ವೈಯಕ್ತಿಕ ಸೋಲು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶದ ಕುರಿತು ಅತಿಯಾದ ವಿಶ್ವಾಸದಲ್ಲಿದ್ದೆ. ರಾಜ್ಯ ಸುತ್ತಬೇಕಿದ್ದ ಕಾರಣದಿಂದ ಬೆಂಗಳೂರು ಗ್ರಾಮಾಂತರಕ್ಕೆ ಹೆಚ್ಚು ಸಮಯ ಕೊಡಲಿಲ್ಲ’ ಎಂದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ನ ತಂತ್ರಗಾರಿಕೆ ಫಲ ನೀಡಿತು. ವಿವಾದರಹಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಉತ್ತಮ ತಂತ್ರಗಾರಿಕೆ ಮಾಡಿದರು. ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಹೆಚ್ಚಿನ ಮತ ಸಿಗುವುದಿಲ್ಲ ಎಂದು ಬಿಜೆಪಿಯಿಂದಲೇ ಕಣಕ್ಕಿಳಿಸಿದರು. ಅದು ಕೂಡ ಗೆಲುವಿಗೆ ಕಾರಣ’ ಎಂದು ಶಿವಕುಮಾರ್‌ ಹೇಳಿದರು.

‘ನಮ್ಮ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೂ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಮಾಗಡಿ, ಕುಣಿಗಲ್‌, ರಾಮನಗರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. ಆದರೆ, ಕನಕಪುರದಲ್ಲಿ ನಿರೀಕ್ಷಿತ ಮುನ್ನಡೆ ದೊರಕಿಲ್ಲ. ಕನಿಷ್ಠ 60,000 ಮತಗಳ ಮುನ್ನಡೆ ನಿರೀಕ್ಷಿಸಿದ್ದೆವು. ಆದರೆ, 20,000 ಮತಗಳ ಮುನ್ನಡೆ ಮಾತ್ರ ಸಿಕ್ಕಿದೆ. ಬೆಂಗಳೂರು ದಕ್ಷಿಣ ಸೇರಿದಂತೆ ನಗರ ಪ್ರದೇಶದಲ್ಲಿ ನಮಗೆ ಪೆಟ್ಟುಬಿದ್ದಿದೆ’ ಎಂದರು.

‘ಎಚ್‌.ಡಿ.ದೇವೇಗೌಡರ ಕುಟುಂಬದ ವಿರುದ್ಧ ನಿಮ್ಮ ಮುಂದಿನ ತಂತ್ರಗಾರಿಕೆ ಏನು’ ಎಂಬ ಪ್ರಶ್ನೆಗೆ, ‘ದೇವೇಗೌಡರು, ಕುಮಾರಸ್ವಾಮಿ, ಅನಿತಕ್ಕ, ನಿಖಿಲ್ ಎಲ್ಲರೂ ಈ ಹಿಂದೆ ಸೋತಿದ್ದರು. ಈಗ ಸುರೇಶ್ ಸೋತಿದ್ದಾರೆ ಅಷ್ಟೆ’ ಎಂದು ಮಾತು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.