ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದ ವಿವಿಧ ಬಡಾವಣೆ ಹಾಗೂ ಮೇಲ್ಸೇತುವೆಗಳಲ್ಲಿ ರಾತ್ರಿ ವೇಳೆ ವ್ಹೀಲಿ ನಡೆಸುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರ ಸಂಚಾರ ಪೊಲೀಸರು, 19 ಮಂದಿಯನ್ನು ಬಂಧಿಸಿದ್ದಾರೆ.
ವ್ಹೀಲಿ ನಡೆಸುವವರ ವಿರುದ್ಧ ನಗರದ ವಿವಿಧ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜುಲೈ 23ರಿಂದ 31ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಅವಧಿಯಲ್ಲಿ ಒಟ್ಟು 30 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 27 ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡು, ಮೂರು ಚಾಲನಾ ಪರವಾನಗಿ ಅಮಾನತುಪಡಿಸಲಾಗಿದೆ. ಒಂಬತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್.ಸಿ) ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ವ್ಹೀಲಿ ನಡೆಸುತ್ತಿದ್ದ ಮೂರು ಬಾಲಕರನ್ನು ಪತ್ತೆಹಚ್ಚಿ, ಅವರ ಪೋಷಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
₹15 ಲಕ್ಷ ದಂಡ ಸಂಗ್ರಹ:
ಹೆಚ್ಚು ಪ್ರಖರ ಬೆಳಕು ಹೊರಹಾಕುವ ಹಾಗೂ ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಸಿಕೊಂಡಿರುವ 3,065 ಚಾಲಕರ ವಿರುದ್ಧ ಸಂಚಾರ ಪೂರ್ವ ವಿಭಾಗದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಜುಲೈ 1ರಿಂದ 31ರ ಅವಧಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಚಾಲಕರಿಂದ ₹15.32 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.