ADVERTISEMENT

ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ವಾಸ್ತುಶಿಲ್ಪಿಗಳೊಂದಿಗೆ ಸಂವಾದದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯಿಂದಲೂ ಮಹೇಶ್ವರ್‌ ರಾವ್‌ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 22:38 IST
Last Updated 12 ಡಿಸೆಂಬರ್ 2025, 22:38 IST
‘ಬೆಂಗಳೂರು ಮೂಲಸೌಕರ್ಯ’ ಸಂವಾದದಲ್ಲಿ ಆರ್. ಗಾಯತ್ರಿ ಶೆಟ್ಟಿ, ಉಮಾ ರೆಡ್ಡಿ, ಮಹೇಶ್ವರ್‌ ರಾವ್, ಎಲ್.ಕೆ. ಅತೀಕ್, ನರೇಶ್ ನರಸಿಂಹನ್, ದಿನೇಶ್ ವರ್ಮಾ ಭಾಗವಹಿಸಿದ್ದರು
‘ಬೆಂಗಳೂರು ಮೂಲಸೌಕರ್ಯ’ ಸಂವಾದದಲ್ಲಿ ಆರ್. ಗಾಯತ್ರಿ ಶೆಟ್ಟಿ, ಉಮಾ ರೆಡ್ಡಿ, ಮಹೇಶ್ವರ್‌ ರಾವ್, ಎಲ್.ಕೆ. ಅತೀಕ್, ನರೇಶ್ ನರಸಿಂಹನ್, ದಿನೇಶ್ ವರ್ಮಾ ಭಾಗವಹಿಸಿದ್ದರು   

ಬೆಂಗಳೂರು: ‘ಶಿಲಾಯುಗದಿಂದ ನಡೆಯುತ್ತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಮುಗಿಯುತ್ತದೆಯೇ? ಮೇಲ್ಸೇತುವೆ ಅಂತ್ಯವಾಗುವ ಕಡೆ ಭೂಸ್ವಾಧೀನವಾಗದೆ ಕಾಮಗಾರಿ ಆರಂಭಿಸಿದ್ದು ಏಕೆ? ಮೆಟ್ರೊ ಬರದಂತೆ ತಡೆದಿರುವ ಈ ಮೇಲ್ಸೇತುವೆ ಉಪಯೋಗ ಆಗುವುದೇ? ಟ್ರಂಪ್‌ ಮಧ್ಯಸ್ಥಿಕೆ ವಹಿಸಿದ್ದು ನಿಜವೇ?’

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಟೀರಿಯರ್‌ ಡಿಸೈನರ್ಸ್‌ ಆಯೋಜಿಸಿದ್ದ ‘ಡಿಸೈನೂರು 5.0’ನಲ್ಲಿ ‘ಬೆಂಗಳೂರು ಮೂಲಸೌಕರ್ಯ’ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಲ್‌.ಕೆ. ಅತೀಕ್‌ ಸೇರಿದಂತೆ ತಜ್ಞರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರನ್ನು ಕೇಳಿದ ಪ್ರಶ್ನೆಗಳಿವು.

‘ಒಂದು ಮೇಲ್ಸೇತುವೆ ಆರಂಭಿಸುವ ಮೊದಲು ಅದಕ್ಕೆ ಬೇಕಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಎಂಜಿನಿಯರ್‌ಗಳಿಗೆ ಅನಿಸುವುದಿಲ್ಲವೇ? ಮೇಲ್ಸೇತುವೆಯನ್ನು ಶಿಲಾಯುಗದಿಂದ ನಡೆಸುತ್ತಿದ್ದೀರಿ, ಅದನ್ನು ಎಲ್ಲಿ ಅಂತ್ಯಗೊಳ್ಳುತ್ತದೆ? ಇಲ್ಲಿ ಸಾಧ್ಯವಾಗದಿದ್ದರೆ ಸಿಲ್ಕ್‌ಬೋರ್ಡ್‌ಗೆ ತೆಗೆದುಕೊಂಡು ಹೋಗಿಬಿಡಿ’ ಎಂದು ವೆಂಕಟರಾಮನ್ ಅಸೋಸಿಯೇಟ್ಸ್‌ನ ವ್ಯವಸ್ಥಾಪಕ ಪಾಲುದಾರ ನರೇಶ್‌ ನರಸಿಂಹನ್‌ ಪ್ರಶ್ನಿಸಿದರು.

ADVERTISEMENT

‘ಕಾನೂನು ತೊಡಕಾಗಿದ್ದು, ಒಂದು ಭಾಗದಲ್ಲಿ ರ್‍ಯಾಂಪ್‌ ಕೆಲಸ ನಡೆಯುತ್ತಿದೆ. ಮುಂದಿನ ಜೂನ್‌–ಜುಲೈನಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಮುಗಿಯಲಿದೆ’ ಎಂದು ಮಹೇಶ್ವರ್‌ ರಾವ್ ಉತ್ತರಿಸಿದಾಗ, ‘ಯಾವ ವರ್ಷ, ಮತ್ತೊಮ್ಮೆ ಹೇಳಿ’ ಎಂದು ಅವರನ್ನು ಪ್ರಶ್ನಿಸಲಾಯಿತು.

‘ನಗರದ ಪ್ರತಿಯೊಂದು ಪ್ರಮುಖ ಸ್ಥಳದಲ್ಲೂ ‘ನೆರೆಹೊರೆ ಪ್ರದೇಶ’ವನ್ನು ಅಭಿವೃದ್ಧಿ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬೇಕು. ಸಾರ್ವಜನಿಕ ಸ್ಥಳಗಳಾದ ಉದ್ಯಾನ ಹಾಗೂ ಮೈದಾನಗಳಿಗೆ ಮುಕ್ತ ಪ್ರವೇಶ ನೀಡಬೇಕು. ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳನ್ನು ನಗರದಲ್ಲಿ ನಿರ್ಮಿಸಬೇಕು. ಒಂದು ರಸ್ತೆಯಲ್ಲಿ ಯಾವುದಾದರೊಂದು ದಿನ ವಾಹನ ಸಂಚಾರ ನಿಲ್ಲಿಸಿ, ಆಚರಣೆಗಳಿಗೆ ಅನುವು ಮಾಡಿಕೊಡಬೇಕು’ ಎಂದು ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ವಿಶೇಷ ಉದ್ದೇಶ ಘಟಕದ ಅಧ್ಯಕ್ಷರೂ ಆಗಿರುವ ಎಲ್‌.ಕೆ. ಅತೀಕ್‌ ಹೇಳಿದರು.

‘ನಗರದಲ್ಲಿ ಒಂದು ಚರ್ಚ್‌ ಸ್ಟ್ರೀಟ್‌, ಒಂದು ಉತ್ತಮ ಫುಟ್‌ಪಾತ್‌ ಇದ್ದರೆ ಸಾಲದು. ಪ್ರತಿ ಸ್ಥಳದಲ್ಲೂ ನಗರವನ್ನು ಬಿಂಬಿಸುವ ಅಭಿವೃದ್ಧಿಗಳಿರಬೇಕು. ಬೀದಿದೀಪ, ಪಾದಚಾರಿಗಳು ಒಂದೊಂದು ಕಡೆ ಒಂದು ರೀತಿ ಇದ್ದರೆ, ನಗರದ ಐಕಾನ್‌ ಆಗಲು ಸಾಧ್ಯವಿಲ್ಲ’ ಎಂದು ನರೇಶ್‌ ಅಭಿಪ್ರಾಯಪಟ್ಟರು.

‘ಕ್ಷಿಪ್ರ ಬೆಳವಣಿಗೆಯಿಂದ ಮುಂದಿನ 30 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 3.3 ಕೋಟಿಗೆ ಮುಟ್ಟುವ ನಿರೀಕ್ಷೆ ಇದ್ದು, ಮೂಲ ಸೌಕರ್ಯ ಸೇರಿದಂತೆ ನಿರ್ಮಾಣ ಕಾರ್ಯಗಳು ಹೆಚ್ಚಾಗಲಿವೆ. ಇದರಿಂದ ದೂಳು ಹೆಚ್ಚಾಗುತ್ತದೆ. ಮಾಲಿನ್ಯರಹಿತ ಗುಣಮಟ್ಟದ ಗಾಳಿ ಇರುವಂತೆ ನೋಡಿಕೊಳ್ಳಲು ಹಲವು ಪ್ರಯತ್ನ ಮಾಡಲಾಗುತ್ತಿದೆ. ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ, ಸ್ವಚ್ಛತೆಯನ್ನು ಕಾಪಾಡಲು ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಮಹೇಶ್ವರ್‌ ರಾವ್‌ ಹೇಳಿದರು.

ಗಾಯತ್ರಿ ನಮಿತ ಆರ್ಕಿಟೆಕ್ಟ್ಸ್ ಸಹಾಯಕ ಸಂಸ್ಥಾಪಕಿ ಆರ್. ಗಾಯತ್ರಿ ಶೆಟ್ಟಿ ಸಂವಾದ ನಡೆಸಿಕೊಟ್ಟರು. ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಎಸಿಇ ಗ್ರೂಪ್ ಆಫ್ ಆರ್ಕಿಟೆಕ್ಟ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ವರ್ಮಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.