ADVERTISEMENT

ಅಭಿವೃದ್ಧಿ ಆಗಿದ್ದರೆ ಸೀರೆ ಹಂಚಬೇಕಿತ್ತೆ: ಮುನಿರತ್ನಗೆ ಎಚ್‌ಡಿಕೆ ಪ್ರಶ್ನೆ

ಮುನಿರತ್ನಗೆ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 19:52 IST
Last Updated 31 ಅಕ್ಟೋಬರ್ 2020, 19:52 IST

ಬೆಂಗಳೂರು: ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿದ್ದರೆ ಈಗ ಏಕೆ ಸೀರೆ, ಹಣ ಹಂಚಬೇಕಾದ ಪ್ರಮೇಯ ಬರುತ್ತಿತ್ತು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಪ್ರಶ್ನಿಸಿದರು.

ಕ್ಷೇತ್ರದ ವಿವಿಧೆಡೆ ಶನಿವಾರ ರೋಡ್‌ ಷೋ ನಡೆಸಿ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಪರ ಮತ ಯಾಚಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಎಲ್ಲ ಗೊತ್ತಿದ್ದೂ ತಪ್ಪು ಮಾಡಿದ್ದಾರೆ. ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಸೃಷ್ಟಿಸುವ ಅವಕಾಶ ಜನರ ಕೈಯಲ್ಲಿದೆ’ ಎಂದರು.

ಲೂಟಿಕೋರರಿಗೆ ಮತ ಹಾಕಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಹೇಳಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೀರಾ? ಮತದಾರರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಯುವಕರು, ಪ್ರಾಮಾಣಿಕರಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಪೀಣ್ಯದಲ್ಲಿ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಹಲವು ಯೋಜನೆಗಳನ್ನು ನರೇಂದ್ರ ಮೋದಿ ಹೈಜಾಕ್‌ ಮಾಡಿದ್ದಾರೆ. ತಮ್ಮದೇ ಸ್ವಂತ ಯೋಜನೆಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.

‘ನಮ್ಮ ಪಕ್ಷದಲ್ಲಿದ್ದ ಹನುಮಂತರಾಯಪ್ಪ ಈಗ ಜಾತಿ ಹೆಸರು ಹೇಳುತ್ತಿದ್ದಾರೆ. ಹತ್ತು ವರ್ಷದಿಂದ ಒಕ್ಕಲಿಗರನ್ನು ಹಾಳು ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಒಬ್ಬ ವ್ಯಕ್ತಿಯನ್ನು ಕರೆತಂದು ವೈಭವೀಕರಿಸಿದ್ದ ಕಾಂಗ್ರೆಸ್‌ನವರು ಈಗ ಅದೇ ವ್ಯಕ್ತಿಯನ್ನು ನಂಬಬೇಡಿ ಎಂದು ಹೇಳುತ್ತಿದ್ದಾರೆ. ಮತದಾರರು ಯಾರನ್ನು ನಂಬಬೇಕು’ ಎಂದು ಕೇಳಿದರು.

ಶಾಸಕ ಆರ್‌. ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ರಮೇಶ್‌ ಗೌಡ, ಕೃಷ್ಣಮೂರ್ತಿ ವಿ., ಪಕ್ಷದ ವಕ್ತಾರ ಟಿ.ಎ. ಶರವಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.