ADVERTISEMENT

ವೈಟ್ ಟಾಪಿಂಗ್‌ ಗುತ್ತಿಗೆ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

ಯಡಿಯೂರು ವಾರ್ಡ್‌ನಲ್ಲಿ ಟೆಂಡರ್‌ ಕರೆಯದೇ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:02 IST
Last Updated 17 ಅಕ್ಟೋಬರ್ 2019, 20:02 IST

ಬೆಂಗಳೂರು: ಯಡಿಯೂರು ವಾರ್ಡ್‌ನ ಎರಡು ರಸ್ತೆಗಳ ವೈಟ್‌ ಟಾಪಿಂಗ್ ಕಾಮಗಾರಿಗಳಿಗೆ ನಿಯಮ ಮೀರಿ ಅಂದಾಜು ಪಟ್ಟಿ ತಯಾರಿಸಿದ ಹಾಗೂ ಟೆಂಡರ್ ಕರೆಯದೇ ಕಾಮಗಾರಿ ಗುತ್ತಿಗೆ ನೀಡಲು ಮುಂದಾದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಮಾಜಿ ಮೇಯರ್‌ಗಳು ಮತ್ತು ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕರ ಜತೆಗೂಡಿ ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ‘ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿಯ ವಕ್ತಾರ ಎಂದು ಹೇಳಿಕೊಂಡಿರುವ ಎನ್.ಆರ್. ರಮೇಶ್ ಅವರು ಸೂಪರ್ ಸಿ.ಎಂ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಚಿವಾಲಯ, ಮುಖ್ಯ ಕಾರ್ಯದರ್ಶಿ ಕಚೇರಿ ಮತ್ತು ಬಿಜೆಪಿ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು’ ಎಂದರು.

ADVERTISEMENT

‘ಗುತ್ತಿಗೆದಾರರಾದ ಆರ್. ಸತೀಶ್ ಮತ್ತು ಎಸ್. ಮಂಜುನಾಥ್ ಎಂಬುವವರು ಎನ್‌.ಆರ್. ರಮೇಶ್ ಅವರ ಬೇನಾಮಿ ಗುತ್ತಿಗೆದಾರರು ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲಾ ನಿಯಮಗಳನ್ನು ಉಲ್ಲಂಘಿಸಿಈ ಇಬ್ಬರಿಗೆ ಗುತ್ತಿಗೆ ವಹಿಸಲು 4(ಜಿ) ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ ಎಂದರೆ ಏನರ್ಥ. ಮುಖ್ಯಮಂತ್ರಿಗೆ ಇದರಿಂದ ಎಷ್ಟು ಕಿಕ್‌ಬ್ಯಾಕ್ ಹೋಗಿದೆ’ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ವಕ್ತಾರರೊಬ್ಬರ ಅಣತಿಯನ್ನು ಮುಖ್ಯ ಕಾರ್ಯದರ್ಶಿ ಪಾಲಿಸಬೇಕು ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಈ ಇಬ್ಬರ ನಡುವೆ ನಡೆದಿರುವ ಸಂಭಾಷಣೆಯನ್ನು ಗಮನಿಸಿದರೆ ಆಡಳಿತ ಯಂತ್ರ ಎಷ್ಟರ ಮಟ್ಟಿಗೆ ಹಳಿ ತಪ್ಪಿದೆ ಎಂಬುದು ಗೊತ್ತಾಗುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ ಪ್ರಕರಣಗಳನ್ನು ಗಮನಿಸಿದರೆ ಕಾನೂನು ಸುವ್ಯವಸ್ಥೆಯೂ ಹಾಳಾಗಿದೆ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಯೊಬ್ಬರು ಎನ್.ಆರ್. ರಮೇಶ್ ವಿರುದ್ಧ ದೂರು ನೀಡಿದ್ದಾರೆ. ಅವರ ರೀತಿಯೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಪ್ರಾಮಾಣಿಕ ಅಧಿಕಾರಿಗಳು ಮುಂದೆ ಬಂದರೆ ಕಾಂಗ್ರೆಸ್ ನೈತಿಕ ಬೆಂಬಲ ನೀಡಲಿದೆ ಎಂದರು.

ಮಾಜಿ ಮೇಯರ್ ಪಿ.ಆರ್. ರಮೇಶ್‌ ಮಾತನಾಡಿ, ‘ಸರ್ಕಾರ‌ ಮತ್ತು ಪಾಲಿಕೆ ಅಧಿಕಾರಿಗಳಿಂದ ಪಾರದರ್ಶಕ ಕಾಯ್ದೆ ಸಂಪೂರ್ಣ ಉಲ್ಲಂಘನೆ ಆಗಿದೆ. ಯಾವುದೇ ಅಧಿಕಾರ ಇಲ್ಲದ ವ್ಯಕ್ತಿಯೊಬ್ಬರು ಅಧಿಕಾರಿಗಳ ಮೇಲೆ ದರ್ಪ ತೋರಿಸಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ’ ಎಂದು ಆರೋಪಿಸಿದರು.

ಮಾಜಿ ಮೇಯರ್‌ಗಳಾದ ಎಂ.ರಾಮಚಂದ್ರಪ್ಪ, ಜಿ.ಪದ್ಮಾವತಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಅಬ್ದುಲ್‌ ವಾಜಿದ್‌, ಶಿವರಾಜ್‌, ಆರ್‌.ಎಸ್‌.ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.