ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಕೆ. ಆರ್ ವೃತ್ತದವರೆಗೆ ಎರಡೂ ಬದಿಯಲ್ಲಿ ರಸ್ತೆ ಅಗೆದಿರುವುದರಿಂದ ದ್ವಿಚಕ್ರ ಸವಾರರೊಬ್ಬರು ಅಪಘಾತಕ್ಕೀಡಾಗಿರುವ ದೃಶ್ಯ ಪ್ರಜಾವಾಣಿ ಚಿತ್ರ:ರಂಜು ಪಿ.
ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ಸರ್ಕಲ್ ಸಂಪರ್ಕಿಸುವ ರಸ್ತೆ, ಪಾದಚಾರಿ ಮಾರ್ಗಗಳು ಅಧ್ವಾನವಾಗಿವೆ. ಇದರಿಂದಾಗಿ ಪಾದಚಾರಿಗಳು ವಾಹನದಟ್ಟಣೆ ಇದ್ದರೂ ಅನಿವಾರ್ಯವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುವಂತಾಗಿದೆ.
ಈ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಬೆಸ್ಕಾಂನವರು ಭೂಗತ ಕೇಬಲ್ ಹಾಗೂ ಜಲಮಂಡಳಿಯವರು ಕೊಳವೆಗಳನ್ನು ಅಳವಡಿಸಲು ಎರಡೂ ಬದಿಯ ಪಾದಚಾರಿ ಮಾರ್ಗಗಳಲ್ಲಿ ಚರಂಡಿ ಮೇಲಿನ ಸ್ಲ್ಯಾಬ್‌ಗಳನ್ನು ತೆಗೆದಿದ್ದಾರೆ. ಕೆಲವು ಕಡೆ ಗುಂಡಿಗಳನ್ನು ತೆಗೆಯಲಾಗಿದೆ. ಗುಂಡಿ ತೆಗೆದಿರುವ ಹಾಗೂ ಸ್ಲ್ಯಾಬ್‌ಗಳನ್ನು ತೆಗೆದಿರುವ ಜಾಗದಲ್ಲಿ ಬ್ಯಾರಿಕೇಡ್‌ಗಳನ್ನು ಮುಚ್ಚಿದ್ದಾರೆ.
ಇನ್ನೊಂದು ಕಡೆ ರಸ್ತೆ ಬದಿಯಲ್ಲಿ (ಸೆಂಟ್ರಲ್ ಕಾಲೇಜು ಭಾಗದ) ಪಾದಚಾರಿ ಮಾರ್ಗವೂ ಸೇರಿದಂತೆ ಅಲ್ಲಲ್ಲಿ ಮರಳು, ಮಣ್ಣಿನ ರಾಶಿ ಹಾಕಲಾಗಿದೆ. ಹೀಗಾಗಿ ನಡೆದಾಡುವವರು ಪಾದಚಾರಿ ಮಾರ್ಗವನ್ನು ದಾಟಲಾಗದೇ ಮುಖ್ಯರಸ್ತೆಯನ್ನೇ ಬಳಸುತ್ತಾರೆ.
ಜನದಟ್ಟಣೆ ಪ್ರದೇಶ : ಈ ಭಾಗದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು), ಸರ್ಕಾರಿ ಕಲಾ ಕಾಲೇಜು, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು(ಯುವಿಸಿಇ), ಸಿಟಿ ಸಿವಿಲ್ ಕೋರ್ಟ್ ಮತ್ತು ಕೆಪಿಟಿಸಿಎಲ್ ಕಚೇರಿಗಳಿವೆ. ಸಾವಿರಾರು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಕೋರ್ಟ್ ಕಾರ್ಯಗಳಿಗೆ ಬರುವ ಸಾರ್ವಜನಿಕರು ಓಡಾಡುವ ರಸ್ತೆ. ಮೆಟ್ರೊ ರೈಲಿನಲ್ಲಿ ಸಂಚರಿಸುವವರು, ಇಲ್ಲಿನ ನಿಲ್ದಾಣದಿಂದ ಕಾಲೇಜು, ಕಚೇರಿಗಳಿಗೆ ಹೋಗಿ–ಬರಲು ಪಾದಚಾರಿ ಮಾರ್ಗವನ್ನು ಬಳಸುತ್ತಾರೆ. ರಸ್ತೆ, ಪಾದಚಾರಿ ಮಾರ್ಗ ಎರಡೂ ಅಧ್ವಾನವಾಗಿರುವ ಕಾರಣ ಸಂಚಾರವೇ ದುಸ್ತರವಾಗಿದೆ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿಗಳು.
ಬೆಂಗಳೂರು ನಗರ ವಿಶ್ವವಿದ್ಯಾಲಯದ(ಬಿಸಿಯು) ಪ್ರವೇಶದ್ವಾರದ ಬದಿಯಲ್ಲೆ ದೊಡ್ಡ ಗುಂಡಿ ಇದೆ. ಅದನ್ನು ಬ್ಯಾರಿಕೇಡ್‌ನಿಂದ ಮುಚ್ಚಲಾಗಿದೆ. ಮೊನ್ನೆ ವಿದ್ಯಾರ್ಥಿನಿಯೊಬ್ಬರು ಗುಂಡಿಯೊಳಗೆ ಕಾಲಿಟ್ಟು ಬಿದ್ದರು. ಯಾರೋ ಅವರನ್ನು ಮೇಲೆತ್ತಿದರು. ಸ್ವಲ್ಪ ಎಚ್ಚರ ತಪ್ಪಿದರೆ ಅಪಘಾತ ಖಚಿತ’ ಎಂದು ನಿತ್ಯ ನ್ಯಾಯಾಲಯಕ್ಕೆ ಬರುವ ಪರಸಪ್ಪ ಮಾಳಗಿ ತಾವು ಕಂಡ ಘಟನೆಯೊಂದನ್ನು ವಿವರಿಸಿದರು.
ಈ ರಸ್ತೆಯಲ್ಲಿ ಬೆಳಗಿನ ಸಂಚಾರ ಒಂದು ರೀತಿ ದುಸ್ತರವಾದರೆ, ರಾತ್ರಿ ವೇಳೆಯಂತೂ ಪಾದಚಾರಿಗಳು ನಡೆದಾಡುವುದೇ ಕಷ್ಟ. ಮಳೆ ಬಂದಾಗ, ಈ ರಸ್ತೆಯಲ್ಲಿನ ಸಂಚಾರದ ಸಂಕಟವನ್ನು ಊಹಿಸುವುದೂ ಅಸಾಧ್ಯ ಎನ್ನುತ್ತಾರೆ ಸುತ್ತಮುತ್ತಲಿನ ವ್ಯಾಪಾರಸ್ಥರು.
‘ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ, ಸಮಸ್ಯೆಯಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಸಮಸ್ಯೆ ಸರಿ ಹೋಗುತ್ತದೆ’ ಎಂದು ಬಿಬಿಎಂಪಿಯವರು ಹೇಳುತ್ತಾರೆ. ಹೀಗಿದ್ದಾಗ ‘ಪಾದಚಾರಿಗಳು ಪರ್ಯಾಯ ಮಾರ್ಗ ಬಳಸಿ’ ಎಂಬ ಮಾಹಿತಿ ಫಲಕವನ್ನಾದರೂ ರಸ್ತೆಗಳ ತುದಿಯಲ್ಲಿ ಹಾಕಬಹುದಲ್ಲವಾ’ ಎಂದು ಹಿರಿಯ ನಾಗರಿಕರೊಬ್ಬರು ಪ್ರಶ್ನಿಸಿದರು.
‘ಮೊದಲು ರಸ್ತೆಯ ಒಂದು ಬದಿಯನ್ನು ವೈಟ್‌ಟಾಪಿಂಗ್ ಮಾಡಿ, ನಂತರ ಇನ್ನೊಂದು ಬದಿ ಕೈಗೆತ್ತಿಕೊಂಡಿದ್ದರೆ, ಈ ಸಮಸ್ಯೆ ಆಗುತ್ತಿರಲಿಲ್ಲ. ಎರಡೂ ಬದಿಯ ರಸ್ತೆಗಳನ್ನು ಒಟ್ಟಿಗೆ ಅಗೆದಿರುವುದರಿಂದ, ಪಾದಚಾರಿ ಮಾರ್ಗ ನಡೆಯಲಾರದಷ್ಟು ಹಾಳಾಗಿದೆ’ ಎಂದು ಬಿಸಿಯು ಸಿಬ್ಬಂದಿಯೊಬ್ಬರು ಹೇಳಿದರು.
ವೈಟ್‌ಟಾಪಿಂಗ್ ಪೂರ್ಣಗೊಂಡಿರುವ ಈ ರಸ್ತೆಗೆ ಸಮನಾಂತರವಾಗಿರುವ ಅರಮನೆ ರಸ್ತೆಯ ಪಾದಚಾರಿ ಮಾರ್ಗದಲ್ಲೂ ಕೆಲವೆಡೆ ಕಲ್ಲುಗಳು ಕಿತ್ತುಹೋಗಿ ಗುಂಡಿಗಳಾಗಿವೆ. ಇದೇ ಮಾರ್ಗದಲ್ಲಿ ಕಸದ ರಾಶಿ ಹಾಕಲಾಗಿದೆ. ಮೂಗು ಮುಚ್ಚಿಕೊಂಡೇ ಪಾದಚಾರಿಗಳು ಓಡಾಡಬೇಕಿದೆ.
ಸೆಂಟ್ರಲ್ ಕಾಲೇಜು ರಸ್ತೆಯುದ್ದಕ್ಕೂ ಫುಟ್‌ಪಾತ್‌ನಲ್ಲಿ ದೊಡ್ಡ ಗುಂಡಿಗಳಾಗಿವೆ. ಈ ರಸ್ತೆಯಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ಮಧ್ಯೆ ಓಡಾಡುವುದು ಅನಿವಾರ್ಯವಾಗಿದೆ. ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ವೈಟ್‌ಟಾಪಿಂಗ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು– ಅಪೂರ್ವ, ಜಿಲ್ಲಾಧ್ಯಕ್ಷೆ ಎಐಡಿಎಸ್‌ಒ ಬೆಂಗಳೂರು ಜಿಲ್ಲಾ ಸಮಿತಿ
ಪಾದಚಾರಿ ಮಾರ್ಗದಲ್ಲಿ ಅಲ್ಲಲ್ಲಿ ಗುಂಡಿಗಳಾಗಿವೆ. ಜನರು ಗಡಿಬಿಡಿಯಲ್ಲಿ ಅರಿವಿಲ್ಲದೇ ಗುಂಡಿಗಳಲ್ಲಿ ಕಾಲಿಟ್ಟು ಬೀಳುತ್ತಾರೆ. ರಸ್ತೆ ಕಾಮಗಾರಿ ಬೇಗ ಮುಗಿಸಬೇಕು. ಅದಕ್ಕೂ ಮುನ್ನ ಪಾದಚಾರಿ ಮಾರ್ಗದ ಗುಂಡಿಗಳಿಗೆ ಸ್ಲ್ಯಾಬ್ ಜೋಡಿಸಿ ಅಗತ್ಯವಿದ್ದರೆ ಬೇರೆ ಎಲ್ಲಾದರೂ ಓಪನ್ ಮಾಡಿಕೊಳ್ಳಲಿ.- ಪರಸಪ್ಪ ಮಾಳಗಿ ಲಿಂಗಾನಯಕನಹಳ್ಳಿ
ನಾನು ನಿತ್ಯ ವಿಧಾನಸೌಧ ಹೈಕೋರ್ಟ್‌ಗೆ ಹೋಗಲು ಇದೇ ರಸ್ತೆ ಬಳಸುತ್ತೇನೆ. ಪಾದಚಾರಿ ಮಾರ್ಗ ಹಾಳಾಗಿದೆ. ರಸ್ತೆಯನ್ನೂ ಅಗೆದಿದ್ದಾರೆ. ವಯಸ್ಸಾದವರು ಓಡಾಡುವುದು ಕಷ್ಟ. ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಪೂರ್ಣಗೊಳಿಸಿ ಅಪಾಯ ತಪ್ಪಿಸಬೇಕು. –ಅಂಜನ್ ಕುಮಾರ್ ವಡ್ನಾಳ್ –––– ಪಾದಚಾರಿ ಮಾರ್ಗದಲ್ಲಾಗಿರುವ ಗುಂಡಿಗಳನ್ನು ಮುಚ್ಚಿರುವ ಬ್ಯಾರಿಕೇಡ್‌ಗಳು ಭದ್ರವಿಲ್ಲ. ಅವುಗಳನ್ನು ತೆಗೆದು ಸ್ಲ್ಯಾಬ್ ಅಳವಡಿಸಬೇಕು. ಇಲ್ಲದಿದ್ದರೆ ಅಪಾಯ ಸಂಭವಿಸುತ್ತದೆನಮ್ ಋಷಿ, ಸಿನಿಮಾ ನಿರ್ದೇಶಕ
ಪ್ರಸ್ತುತ ಯುಟಿಲಿಟಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದು ಒಂದು ತಿಂಗಳೊಳಗೆ ಮುಗಿಯಲಿದೆ. ಇನ್ನೊಂದು ತಿಂಗಳೊಳಗೆ ವೈಟ್‌ಟಾಪಿಂಗ್ ನಂತರ ಒಂದು ತಿಂಗಳಲ್ಲಿ ಪಾದಚಾರಿ ಮಾರ್ಗ ಪೂರ್ಣಗೊಳ್ಳುತ್ತದೆ. ಮೂರು ತಿಂಗಳೊಳಗೆ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳುತ್ತವೆ.– ಎಂ.ಲೋಕೇಶ್ ಮುಖ್ಯ ಎಂಜಿನಿಯರ್ ಬಿಬಿಎಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.