ADVERTISEMENT

ರಾಜವಂಶಸ್ಥರ ಸಂಬಂಧಿಯೆಂದು ಯುವತಿಯರಿಗೆ ವಂಚನೆ

ಮದುವೆಯಾಗುವುದಾಗಿ ನಂಬಿಸಿ ಹಣ ‍ಪಡೆದು ನಾಪತ್ತೆ| ಆರೋಪಿ ಬಂಧಿಸಿದ ವೈಟ್‌ಫೀಲ್ಡ್ ವಿಭಾಗ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:57 IST
Last Updated 12 ಜುಲೈ 2021, 15:57 IST
ಸಿದ್ದಾರ್ಥ್
ಸಿದ್ದಾರ್ಥ್   

ಬೆಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಕೆ. ಸಿದ್ದಾರ್ಥ್ (33) ಎಂಬಾತನನ್ನು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಲಕ್ಷ್ಮಿಪುರದ ಸಿದ್ಧಾರ್ಥ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಅದರನ್ವಯ ಆರೋಪಿಯನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯ ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೈಸೂರು ರಾಜವಂಶಸ್ಥರ ಸಂಬಂಧಿಕರಾದ ಅರಸು ಕುಟುಂಬದ ಸದಸ್ಯನೆಂದು ಹೇಳಿ ಆರೋಪಿ ಯುವತಿಯರನ್ನು ವಂಚಿಸುತ್ತಿದ್ದ. ಪೊಲೀಸರ ವಿಶೇಷ ತಂಡ, ತಾಂತ್ರಿಕ ಪುರಾವೆಗಳನ್ನು ಕಲೆಹಾಕಿ ಆರೋಪಿಯನ್ನು ಸ್ವಂತ ಊರಲ್ಲೇ ಬಂಧಿಸಿದೆ. ಆತನಿಂದ ಮೂರು ಮೊಬೈಲ್ ಹಾಗೂ ಆರು ಡೆಬಿಟ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘7ನೇ ತರಗತಿ ಅನುತ್ತೀರ್ಣನಾಗಿದ್ದ ಆರೋಪಿ, ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಇಂಗ್ಲಿಷ್ ಹಾಗೂ ಸ್ಪ್ಯಾನಿಷ್ ಭಾಷೆ ಸಹ ಕಲಿತಿದ್ದ. ಅದೇ ಭಾಷೆಯಲ್ಲೇ ಯುವತಿಯರ ಜೊತೆ ಮಾತನಾಡುತ್ತಿದ್ದ’ ಎಂದೂ ಅಧಿಕಾರಿ ಹೇಳಿದರು.

‘ಸಂಗಮ್ ಮ್ಯಾಟ್ರಿಮೋನಿ’ ಹಾಗೂ ‘ಕನ್ನಡ ಮ್ಯಾಟ್ರಿಮೋನಿ’ ಜಾಲತಾಣಗಳಲ್ಲಿ ‘ಸಿದ್ದಾರ್ಥ್ ಅರಸು’ ಹೆಸರಿನಲ್ಲಿ ಆರೋಪಿ ಖಾತೆ ತೆರೆದಿದ್ದ. ಯುವತಿಯರಿಗೆ ರಿಕ್ವೆಸ್ಟ್ ಕಳುಹಿಸಿ, ಮದುವೆಯಾಗುವುದಾಗಿ ಹೇಳುತ್ತಿದ್ದ. ಮೈಕ್ರೊಸಾಫ್ಟ್ ಕಂಪನಿಯ ಅಮೆರಿಕ ಕಚೇರಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ ಆರೋಪಿ ಹೇಳಿಕೊಳ್ಳುತ್ತಿದ್ದ.’

‘ರಾಜವಂಶಸ್ಥರ ಕುಟುಂಬದವರ ಜೊತೆ ಆಟವಾಡುತ್ತಿದ್ದ ಫೋಟೊಗಳನ್ನು ಫೋಟೊಶಾಪ್‌ನಲ್ಲಿ ಸಿದ್ಧಪಡಿಸಿ ಯುವತಿಯರಿಗೆ ಕಳುಹಿಸುತ್ತಿದ್ದ. ಆತನ ಮಾತು ನಂಬಿದ್ದ ಯುವತಿಯರು, ಸಲುಗೆಯಿಂದ ಮಾತನಾಡಲಾರಂಭಿಸುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ವೈದ್ಯಕೀಯ ಹಾಗೂ ವೈಯಕ್ತಿಕ ಕಾರಣ ನೀಡಿ ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ. ಅದಾದ ನಂತರ ನಾಪತ್ತೆಯಾಗುತ್ತಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಯುವತಿಯರನ್ನು ವಂಚಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಇದುವರೆಗೂ ಆತ ಹಲವು ಯುವತಿಯರನ್ನು ವಂಚಿಸಿರುವ ಮಾಹಿತಿ ಇದೆ. ಯಾರಾದರೂ ವಂಚನೆಗೀಡಾಗಿದ್ದರೆ ಪೊಲೀಸರಿಗೆ ದೂರು ನೀಡಬಹುದು’ ಎಂದೂ ಅಧಿಕಾರಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.