ADVERTISEMENT

ವೈಟ್‌ಫೀಲ್ಡ್‌ಗೆ ಮೆಟ್ರೊ ಒಂದು ತಿಂಗಳು ವಿಳಂಬ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 19:49 IST
Last Updated 30 ನವೆಂಬರ್ 2022, 19:49 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ನಡುವೆ ಮೆಟ್ರೊ ರೈಲು ಸಂಚಾರಕ್ಕೆ ಇನ್ನೂ ನಾಲ್ಕು ತಿಂಗಳು ಕಾಯಬೇಕಿದ್ದು, ಮಾರ್ಚ್‌ ಎರಡನೇ ವಾರದಲ್ಲಿ ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಜನವರಿ ಅಥವಾ ಫೆಬ್ರುವರಿಯಲ್ಲಿ ಸಂಚಾರ ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಕ್ಟೋಬರ್ 21ರಿಂದಲೇ ಪರೀಕ್ಷಾರ್ಥ ಸಂಚಾರ ಕೂಡ ಆರಂಭವಾಗಿದೆ. ನಿಲ್ದಾಣಗಳ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇತ್ತು. ಆದರೆ, ಮಳೆ‌ ತೊಡಕಾಗಿ ಕಾಡಿದೆ. ಆದ್ದರಿಂದ ಮೆಟ್ರೊ ರೈಲು ಸಂಚಾರವೂ ಒಂದು ತಿಂಗಳು ವಿಳಂಬವಾಗಲಿದೆ.

‘ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮಾರ್ಚ್ ಎರಡನೇ ವಾರದಲ್ಲಿ ಮೆಟ್ರೊ ರೈಲುಗಳ ಸಂಚಾರ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಮಳೆ ಇದ್ದಿದ್ದರಿಂದ ಕಾಮಗಾರಿ ಕೊಂಚ ವಿಳಂಬವಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ತನಕ 15.50 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ 13 ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ವೈಟ್‌ಫೀಲ್ಡ್‌ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಲೆಕ್ಕಾಚಾರ.

ವಿಮಾನ ನಿಲ್ದಾಣ ಮಾರ್ಗ: ಹೆಚ್ಚುವರಿ ಒಂದು ನಿಲ್ದಾಣ

ವಿಮಾನ ನಿಲ್ದಾಣ ಮಾರ್ಗದಲ್ಲಿ ಮತ್ತೊಂದು ಹೆಚ್ಚುವರಿ ನಿಲ್ದಾಣಕ್ಕೆ ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರದಿಂದ ಅನುಮೋದನೆ ಕೋರಿದೆ.

ಈ ಮಾರ್ಗದಲ್ಲಿ ಕೆ.ಆರ್.ಪುರದಿಂದ ವಿಮಾನ ನಿಲ್ದಾಣ ತನಕ 17 ನಿಲ್ದಾಣಗಳನ್ನು ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಚಿಕ್ಕಜಾಲ ಬಳಿ ಇನ್ನೊಂದು ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತರೆ ಈ ಹೆಚ್ಚುವರಿ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅಂಜುಂ ಪರ್ವೇಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.