ADVERTISEMENT

ಪತ್ನಿಯ ಕೊಂದು ವಾಮಾಚಾರದ ಕಥೆ ಕಟ್ಟಿದ್ದ

2011ರಲ್ಲಿ ನಡೆದಿದ್ದ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:06 IST
Last Updated 1 ಮಾರ್ಚ್ 2019, 20:06 IST
   

ಬೆಂಗಳೂರು: ಪತ್ನಿಯನ್ನು ಕೊಂದು ವಾಮಾಚಾರದ ಕಥೆ ಕಟ್ಟಿ ಸಾಕ್ಷ್ಯ ನಾಶ ಮಾಡಿದ್ದ ಅಪರಾಧಿ ವಿನಯ್‌ಕುಮಾರ್‌ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ68ನೇ ಅಪರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೊಲೆ ಮಾಡಲು ವಿನಯ್‌ಕುಮಾರ್‌ನಿಗೆ ಸಹಕಾರ ನೀಡಿದ್ದ ಸ್ನೇಹಿತ ಸೋಮಶೇಖರ್‌ ಎಂಬಾತನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಲಾಗಿದೆ.

2011ರ ಜುಲೈ 22ರಂದು ನಡೆದಿದ್ದ ವನಜಾಕ್ಷಿ ಎಂಬುವರ ಕೊಲೆ ಪ್ರಕರಣದ ವಿಚಾರಣೆಯನ್ನುನ್ಯಾಯಾಧೀಶ ಬಿ. ನಂದಕುಮಾರ್ ವಿಚಾರಣೆ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪ‍್ರಶಾಂತ್ ತೋರಗಲ್ ವಾದಿಸಿದ್ದರು.

ADVERTISEMENT

ಪ್ರಕರಣದ ವಿವರ: ಗೊಟ್ಟಿಗೆರೆ ನಿವಾಸಿಯಾದ ವಿನಯ್‌ಕುಮಾರ್,ವನಜಾಕ್ಷಿ ಅವರನ್ನು2005ರ ಆಗಸ್ಟ್‌ 22ರಂದು ಮದುವೆ ಆಗಿದ್ದ. ದಂಪತಿಗೆ ಒಂದು ವರ್ಷದ ಗಂಡು ಮಗು ಇತ್ತು.

ವನಜಾಕ್ಷಿ ಅವರ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದ ವಿನಯ್‌ಕುಮಾರ್, ಅದರಿಂದ ಬಂದ ಹಣವನ್ನು ಊರಿನಲ್ಲಿ ಜಮೀನು ವ್ಯವಹಾರಕ್ಕೆ ಬಳಸಿದ್ದ. ಚಿನ್ನಾಭರಣ ಬಿಡಿಸಿಕೊಡುವಂತೆ ಪತ್ನಿ ಒತ್ತಾಯಿಸುತ್ತಿದ್ದರು.

ವನಜಾಕ್ಷಿ ಅವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಅವರನ್ನು ಕೊಲೆ ಮಾಡಿದರೆ ಚಿನ್ನಾಭರಣದ ವಿಷಯವೇ ಬರುವುದಿಲ್ಲ ಎಂದು ತಿಳಿದಿದ್ದ ಆರೋಪಿ, ಕೊಲೆಗೆ ಸಂಚು ರೂಪಿಸಿದ್ದ. ಸ್ನೇಹಿತ ಸೋಮಶೇಖರ್‌ಗೆ ₹30 ಸಾವಿರ ಸಾಲ ಕೊಟ್ಟಿದ್ದ ಆತ, ಪತ್ನಿಯನ್ನು ಕೊಲೆ ಮಾಡಿದರೆ ಸಾಲ ಮನ್ನಾ ಮಾಡಲಾಗುವುದೆಂದು ಹೇಳಿದ್ದ.

2011ರ ಜುಲೈ 22ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಿದ್ರೆ ಮಾತ್ರೆಯ ಪುಡಿ ಬೆರೆಸಿದ್ದ ಮಸಾಲೆ ಪುರಿಯನ್ನು ಪತ್ನಿಗೆ ತಿನ್ನಿಸಿದ್ದ. ಪತ್ನಿಯು ನಿದ್ರೆಗೆ ಜಾರುತ್ತಿದ್ದಂತೆ ಇಬ್ಬರೂ ಅಪರಾಧಿಗಳು, ಅವರನ್ನು ಟಾಟಾ ಸುಮೊದಲ್ಲಿ ಹಾಕಿಕೊಂಡು ಪುಂಗನೂರು ಬಳಿಯ ಮೂಗಾಡಿ ಕೆರೆಯ ಸೇತುವೆ ಬಳಿ ಹೋಗಿದ್ದರು.

ಅಲ್ಲಿಯೇ ಟೆಲಿಫೋನ್ ತಂತಿಯಿಂದ ವನಜಾಕ್ಷಿ ಅವರ ಕುತ್ತಿಗೆಯನ್ನು ಬಿಗಿದು ಕೊಂದಿದ್ದರು. ಸೇತುವೆಗೆ ಹಾಕಿದ್ದ ದೊಡ್ಡ ಪೈಪ್‌ನಲ್ಲಿ ಶವವನ್ನು ಮುಚ್ಚಿಟ್ಟು, ಅದರ ಮೇಲೆ ಕಲ್ಲು– ಮಣ್ಣು ಹಾಗೂ ಗಿಡಗಳನ್ನು ಹಾಕಿದ್ದರು.

ಪತ್ನಿಯನ್ನು ಕೊಂದು ಮನೆಗೆ ಬಂದಿದ್ದ ಅಪರಾಧಿ,ನಿಂಬೆ ಹಣ್ಣು ಕೊಯ್ದು ಅದಕ್ಕೆ ಅರಿಶಿಣ ಹಾಗೂ ಕುಂಕುಮ ಬೆರೆಸಿ ಮನೆ ಮುಂದಿಟ್ಟಿದ್ದ. ಅಲ್ಲಿಯೇ ಮೊಟ್ಟೆಗಳನ್ನೂ ಒಡೆದಿದ್ದ. ‘ವಾಮಾಚಾರ ಮಾಡಿಸಿ ಪತ್ನಿ ವನಜಾಕ್ಷಿಯನ್ನು ಯಾರೋ ಕರೆದುಕೊಂಡು ಹೋಗಿದ್ದಾರೆ’ ಎಂದು ಕೂಗಾಡಿ ಅಕ್ಕ–ಪಕ್ಕದ ನಿವಾಸಿಗಳನ್ನು ನಂಬಿಸಿದ್ದ.

ವನಜಾಕ್ಷಿ ಸಂಬಂಧಿಕರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದಹುಳಿಮಾವು ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಲರಾಮ್, ವಿನಯ್‌ಕುಮಾರ್‌ ಹಾಗೂ ಸೋಮಶೇಖರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.