
ಸಾಂದರ್ಭಿಕ ಚಿತ್ರ
ಬೆಂಗಳೂರು: ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಅನುಮಾನದ ಮೇಲೆ ಪತ್ನಿಗೆ ಬಲವಂತವಾಗಿ ವಿಷಪ್ರಾಶನ ಮಾಡಿಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಯುವಕನಿಗೆ ನಗರದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬಂಡೆಬೊಮ್ಮಸಂದ್ರ ನಿವಾಸಿ ಗುಲ್ಶನ್ ಕುಮಾರ್ (26) ಶಿಕ್ಷೆಗೆ ಒಳಗಾಗಿರುವ ಯುವಕ. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿದ್ದಾರೆ.
‘ಜೀವಾವಧಿ ಶಿಕ್ಷೆಯಲ್ಲಿ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತ ಪಾವತಿಸದೇ ಇದ್ದರೆ ಮತ್ತೊಂದು ವರ್ಷ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸೂರ್ಯನಾರಾಯಣ ವಾದ ಮಂಡಿಸಿದ್ದರು.
ಪ್ರಕರಣವೇನು?: ‘ಹೊಸಕೋಟೆಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆ ಬೊಬ್ಬಸಂದ್ರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಗುಲ್ಶನ್ ಕುಮಾರ್ ಮತ್ತು ಪತ್ನಿ ರೂಬಿ ನೆಲೆಸಿದ್ದರು. ಓಂ ಪ್ರಕಾಶ್ ಎಂಬಾತನೊಂದಿಗೆ ರೂಬಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಗುಲ್‌ಶನ್ ಅನುಮಾನಗೊಂಡಿದ್ದ. 2016ರ ಏಪ್ರಿಲ್ 19ರಂದು ಸಂಜೆ 4.30ಕ್ಕೆ ಓಂ ಪ್ರಕಾಶ್ ಮನೆಗೆ ಹೋಗಿದ್ದ ಗುಲ್ಶನ್, ರೂಬಿ ಜೊತೆಗೆ ಅನೈತಿಕ ಸಬಂಧ ಹೊಂದಿದ್ದೀಯಾ ಎಂದುಳಿ ಗಲಾಟೆ ಮಾಡಿದ್ದ. ರೂಬಿ ತನಗೆ ತಂಗಿ ಇದ್ದಂತೆ ಎಂದು ಓಂ ಪ್ರಕಾಶ್ ಹೇಳಿದರೂ ಕೇಳದೆ, ಆತನಿಗೆ ಕೈಗಳಿಂದ ಹೊಡೆದಿದ್ದ. ನಂತರ ಮನೆಗೆ ಬಂದು ರೂಬಿಗೆ ಬಲವಂತವಾಗಿ ವಿಷ ಕುಡಿಸಿದ್ದ. ಇದರಿಂದ ರೂಬಿ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿಬಿದ್ದಿದ್ದರು. ನಂತರ ರೂಬಿಯ ಮುಖದ ಮೆಲೆ ತಲೆದಿಂಬು ಇಟ್ಟು ಅದುಮಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ’ ಎಂಬುದು ದೋಷಾರೋಪ ಪಟ್ಟಿಯ ವಿವರಣೆ. ಪ್ರಕರಣದ ತನಿಖೆ ನಡೆಸಿದ್ದ ಆವಲಹಳ್ಳಿ ಠಾಣಾ ಪೊಲೀಸರು ಗುಲ್ಶನ್ ವಿರುದ್ಧ ಕೊಲೆ ಅಪರಾಧದಡಿ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.