ಸಾಂಕೇತಿಕ ಚಿತ್ರ
ಬೆಂಗಳೂರು: ಎನ್.ಆರ್.ಐ ಲೇಔಟ್ನಲ್ಲಿ ನಾಯಿಗಳತ್ತ ಕಲ್ಲು ಎಸೆದ ಆರೋಪದ ಮೇಲೆ ಮಹಿಳೆಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದು, ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 23ರಂದು ಮಧ್ಯಾಹ್ನ ಎನ್.ಆರ್.ಐ ಲೇಔಟ್ನಲ್ಲಿ ಘಟನೆ ನಡೆದಿದೆ. ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ದ ಪ್ರಕರಣ ದಾಖಲಾಗಿದೆ.
‘ಮಹಿಳೆಯೊಬ್ಬರು ಸ್ನೇಹಿತರೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ಸಂದರ್ಭದಲ್ಲಿ ಬೀದಿ ನಾಯಿಗಳು ಅವರನ್ನು ಅಟ್ಟಿಸಿಕೊಂಡು ಬಂದಿದ್ದವು. ಇದರಿಂದ ಬೆದರಿದ್ದ ಮಹಿಳೆ ಸ್ವಲ್ಪ ದೂರದಲ್ಲೇ ಸ್ಕೂಟರ್ ನಿಲ್ಲಿಸಿ, ನಾಯಿಗಳತ್ತ ಕಲ್ಲು ಎಸೆದಿದ್ದರು. ಆ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬರು ಸ್ಕೂಟರ್ ಕೀ ಕಸಿದುಕೊಂಡು, ‘ನಾಯಿಗಳಿಗೆ ಕಲ್ಲು ಹೊಡೆದಿದ್ದು ಯಾಕೆ’ ಎಂದು ಪ್ರಶ್ನಿಸಿ ಜಗಳ ತೆಗೆದಿದ್ದಾರೆ. ಅಲ್ಲದೇ, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
‘ಗಲಾಟೆ ವಿಕೋಪಕ್ಕೆ ತಿರುಗಿದ ಮೇಲೆ ಸ್ಥಳೀಯರು, ಇಬ್ಬರನ್ನೂ ಸಮಾಧಾನಪಡಿಸಿ ಸ್ಕೂಟರ್ ಕೀಯನ್ನು ಮಹಿಳೆಗೆ ವಾಪಸ್ ಕೊಡಿಸಿ ಕಳುಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ದೌರ್ಜನ್ಯ ಎಸಗಿದ ಆರೋಪಿಯ ಹೆಸರು, ಫೋಟೊ ಹಾಗೂ ವಿಳಾಸ ನೀಡಿದರೂ ಪೊಲೀಸರು ಎಫ್ಐಆರ್‌ನಲ್ಲಿ ಆರೋಪಿ ಹೆಸರು ನಮೂದಿಸಿಲ್ಲ. ಅಲ್ಲದೇ ಆತನನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರು ನೀಡಿದ ಮಹಿಳೆ ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.