ADVERTISEMENT

ಮಹಿಳಾ ಟೆಕಿ ಆತ್ಮಹತ್ಯೆ: ಪತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:42 IST
Last Updated 10 ಡಿಸೆಂಬರ್ 2021, 19:42 IST
ಪತಿ ವಿನಯ್‌ಕುಮಾರ್ ಜೊತೆ ಸಂಗೀತಾ
ಪತಿ ವಿನಯ್‌ಕುಮಾರ್ ಜೊತೆ ಸಂಗೀತಾ   

ಬೆಂಗಳೂರು: ನಗರದ ಸಾಫ್ಟ್‌ವೇರ್‌ ಕಂಪನಿಯೊಂದರ ಎಂಜಿನಿಯರ್ (ಟೆಕಿ) ಸಂಗೀತಾ (26) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಂಡ್ಯದ ಸಂಗೀತಾ, ನೆಲಮಂಗಲದ ವಿನಯ್‌ ಕುಮಾರ್ ಎಂಬುವರನ್ನು ಪ್ರೀತಿಸಿ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರೂ ಟೆಕಿಗಳು. ಪ್ರತ್ಯೇಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅಮೃತಹಳ್ಳಿ ಬಳಿಯ ವೀರಣ್ಣಪಾಳ್ಯದ ಮನೆಯೊಂದರಲ್ಲಿ ದಂಪತಿ ಬಾಡಿಗೆಗೆ ಇದ್ದರು. ಅದೇ ಮನೆಯ ಕೊಠಡಿಯಲ್ಲಿ ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಆದರೆ, ಮದುವೆಯಾಗಿ ನಾಲ್ಕು ವರ್ಷವಾದರೂ ಸಂಗೀತಾ ಅವರಿಗೆ ಮಕ್ಕಳು ಆಗಿರಲಿಲ್ಲ. ಇದೇ ವಿಚಾರವಾಗಿ ಪತಿ ವಿನಯ್‌, ಪತ್ನಿ ಜೊತೆ ಜಗಳ ತೆಗೆಯಲಾರಂಭಿಸಿದ್ದರು. ನಿತ್ಯವೂ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಸಂಗೀತಾ ಬೇಸತ್ತಿದ್ದರೆಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ.’

ADVERTISEMENT

‘ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಬಳಿ ಮರಣ ಪತ್ರ ಸಹ ಸಿಕ್ಕಿದೆ. ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ. ಅದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.